ADVERTISEMENT

ಪಾಕಿಸ್ತಾನದಲ್ಲಿ ಬಾಂಬ್‌ದಾಳಿ; ಮುಷರಫ್ ಪಾರು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 15:13 IST
Last Updated 3 ಏಪ್ರಿಲ್ 2014, 15:13 IST

ಇಸ್ಲಾಮಾಬಾದ್‌ (ಪಿಟಿಐ); ಪಾಕಿಸ್ತಾನದ ಮಾಜಿ ಅಧ್ಯಕ್ಷ  ಪರ್ವೇಜ್‌ ಮುಷರಫ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು  ಪಾಕ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಹಲವು ವಿವಾದಗಳಿಗೆ ತುತ್ತಾಗಿರುವ ಮುಷರಫ್ ಅವರು ಇಲ್ಲಿನ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದಾರೆ.

ಇಂದು ಬೆಳಗ್ಗೆ ಅನಾರೋಗ್ಯ ಕಾರಣದಿಂದಾಗಿ ಸೇನಾ ಆಸ್ಪತ್ರೆಗೆ ಆಗಮಿಸಿದ್ದರು. ಇಲ್ಲಿಂದ ಮರಳಿ ತಮ್ಮ ಫಾರ್ಮ್‌ಹೌಸ್‌ಗೆ ಹೋಗುವ ಮಾರ್ಗ ಮಧ್ಯದಲ್ಲಿ ಬಾಂಬ್‌ ಸ್ಫೋಟಗೊಂಡಿದ್ದು ಮುಷರಫ್ ಅವರಿದ್ದ ವಾಹನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಪ್‌ವೊಂದರಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿ ಸಿಡಿಸಲಾಗಿತ್ತು. ಮುಷರಫ್ ಅವರಿದ್ದ ವಾಹನ ಆ ಪೈಪ್‌ ಬಿಟ್ಟು ಸುಮಾರು 25 ಮೀಟರ್‌ ಚಲಿಸಿದ ಬಳಿಕ ಬಾಂಬ್ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯಾವುದೇ ಉಗ್ರಗಾಮಿ ಸಂಘಟನೆಗಳು ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.