ADVERTISEMENT

ಪಿಸಿಸಿ ಮುಖ್ಯಸ್ಥರನ್ನು ಬದಲಿಸಿದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 9:48 IST
Last Updated 2 ಮಾರ್ಚ್ 2015, 9:48 IST

ನವದೆಹಲಿ (ಪಿಟಿಐ): ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್, ಪಕ್ಷದ ಪುನಶ್ಚೇತನ ಕಾರ್ಯದಲ್ಲಿ ತೊಡಗಿದಂತಿದೆ. ಐದು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಿರುವ ಕಾಂಗ್ರೆಸ್, ಆ ಹುದ್ದೆಗಳಿಗೆ ಸೋಮವಾರ ಹೊಸಬರನ್ನು ನೇಮಿಸಿದೆ. ಇದೇ ವೇಳೆ, ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಜವಾಬ್ದಾರಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಜಯ್ ನಿರುಪಮ್ ಅವರಿಗೆ ನೀಡಲಾಗಿದೆ.

ಮುಂದಿನ ತಿಂಗಳು ನಡೆಯಲಿರುವ ಎಐಸಿಸಿ ಅಧಿವೇಶನ ಹಾಗೂ ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳ ಹಿನ್ನೆಲೆ ಈ ನೇಮಕಗಳು ಮಹತ್ವ ಪಡೆದಿದೆ.

ಅಜಯ್ ಮಾಕೆನ್ ಅವರಿಗೆ ದೆಹಲಿ ಕಾಂಗ್ರೆಸ್ ಹೊಣೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಮಹಾರಾಷ್ಟ್ರ, ಗುಲಾಂ ಅಹ್ಮದ್ ಮೀರ್ ಅವರಿಗೆ ಜಮ್ಮು ಮತ್ತು ಕಾಶ್ಮೀರ, ಭರತ್ ಸಿಂಗ್ ಸೋಲಂಕಿ ಅವರಿಗೆ ಗುಜರಾತ್ ಹಾಗೂ ಉತ್ತಮ್ ರೆಡ್ಡಿ ಅವರಿಗೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ADVERTISEMENT

ಈ ರಾಜ್ಯಗಳಲ್ಲಿ ಬದಲಾವಣೆ ಕೂಗು ಬಹುದಿನಗಳಿಂದ ಕೇಳಿ ಬರುತ್ತಿತ್ತು. ಜೊತೆಗೆ ಈ ರಾಜ್ಯಗಳಲ್ಲಿ ಹೊಸ ಅಧ್ಯಕ್ಷರ ನೇಮಿಸಲು ರಾಹುಲ್ ಅವರು ಉತ್ಸುಕರಾಗಿದ್ದರು. ಅದರಲ್ಲೂ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಬದಲಾವಣೆಗೆ ಒತ್ತು ನೀಡಿದ್ದರು ಎನ್ನಲಾಗಿದೆ.

'ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಐವರು ಹೊಸ ಅಧ್ಯಕ್ಷರನ್ನು ಹಾಗೂ ಒಬ್ಬರನ್ನು ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಿಸಿದ್ದಾರೆ' ಎಂದು ಪಕ್ಷದ ಸಂಘಟನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಅವರು ತಿಳಿಸಿದ್ದಾರೆ.

ಇದೇ ವೇಳೆ, ಮಲ್ಲು ಭಕ್ತಿ ವಿಕ್ರಮಾರ್ಕ್ ಅವರನ್ನು ತೆಲಂಗಾಣ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರೆಡ್ಡಿ ಅವರು ಪೊನ್ನಾಲ ಲಕ್ಷ್ಮಯ್ಯ ಸ್ಥಾನದಲ್ಲಿ, ಚವಾಣ್ ಅವರು ಮಾಣಿಕ್ ರಾವ್ ಠಾಕ್ರೆ ಅವರ ಸ್ಥಾನಕ್ಕೆ, ಮೀರ್ ಅವರು ಸೈಫುದ್ದೀನ್ ಸೋಜ್ ಅವರ ಬದಲಿಗೆ, ಸೋಲಂಕಿ ಅವರು ಅರ್ಜುನ್ ಮೊದ್ವಾಡಿಯಾ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.