ADVERTISEMENT

ಪುಷ್ಕರ್, ತರೂರ್‌ ಚಾಟ್‌ ವಿವರ ಕೋರಿ ಪತ್ರ

ಪಿಟಿಐ
Published 26 ಸೆಪ್ಟೆಂಬರ್ 2016, 19:04 IST
Last Updated 26 ಸೆಪ್ಟೆಂಬರ್ 2016, 19:04 IST
ಪುಷ್ಕರ್, ತರೂರ್‌ ಚಾಟ್‌ ವಿವರ ಕೋರಿ ಪತ್ರ
ಪುಷ್ಕರ್, ತರೂರ್‌ ಚಾಟ್‌ ವಿವರ ಕೋರಿ ಪತ್ರ   

ನವದೆಹಲಿ: ಸುನಂದಾ ಪುಷ್ಕರ್ ಮತ್ತು ಅವರ ಪತಿ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಮೊಬೈಲ್‌ ಚಾಟ್‌ಗಳ ವಿವರ ನೀಡುವಂತೆ ದೆಹಲಿ ಪೊಲೀಸರು ಕೆನಡಾದ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.

‘ಚಾಟ್‌ ಸಂದೇಶಗಳನ್ನು ಅಳಿಸಲಾಗಿದೆ. ಆ ಚಾಟ್‌ನ ವಿವರಗಳನ್ನು ರಿಸರ್ಚ್‌ ಇನ್‌ ಮೋಷನ್ ಲಿಮಿಟೆಡ್‌ ಕಂಪೆನಿಯಿಂದ (ಬ್ಲ್ಯಾಕ್‌ಬೆರಿ ಕಂಪೆನಿಯ ಮೊದಲಿನ ಹೆಸರು) ಕಲೆಹಾಕಿ ಕೊಡುವಂತೆ ನ್ಯಾಯಾಂಗ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ತರೂರ್‌ ಮತ್ತು ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ನಡುವೆ ಮೊಬೈಲ್‌ ಮೂಲಕ ಕೆಲವು ಸಂದೇಶಗಳ ವಿನಿಮಯ ಆಗಿತ್ತು. ಅವುಗಳನ್ನು ತರೂರ್‌ ಮೊಬೈಲ್‌ನಿಂದ ಅಳಿಸಿಹಾಕಲಾಗಿದೆ. ಈ ವಿಚಾರವನ್ನು ಪುಷ್ಕರ್ ನನಗೆ ತಿಳಿಸಿದ್ದರು’ ಎಂದು ಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪುಷ್ಕರ್ ಅವರ ಮೃತದೇಹ 2014ರ ಜನವರಿಯಲ್ಲಿ ದಕ್ಷಿಣ ದೆಹಲಿಯ ಪಂಚತಾರಾ ಹೋಟೆಲ್‌ವೊಂದರಲ್ಲಿ ಪತ್ತೆಯಾಗಿತ್ತು. ಸಾಯುವ ಹಿಂದಿನ ದಿನ ಪುಷ್ಕರ್ ಅವರು ತರಾರ್ ಜೊತೆ ಟ್ವಿಟರ್‌ನಲ್ಲಿ ಜಗಳ ಮಾಡಿಕೊಂಡಿದ್ದರು.

ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತರೂರ್‌ ಸೇರಿದಂತೆ ಹಲವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ತರೂರ್‌ ಜೊತೆಗಿನ ಸಂಬಂಧ ಯಾವ ಬಗೆಯದ್ದು ಎಂದು ತರಾರ್‌ ಅವರನ್ನೂ ಪೊಲೀಸರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.