ADVERTISEMENT

ಪೊಲೀಸ್–ಬಿಜೆಪಿ ಕಾರ್ಯಕರ್ತರ ಘರ್ಷಣೆ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ಮುಖಂಡರ ಬಂಧನಕ್ಕೆ ಒತ್ತಾಯಿಸಿ ಮೆರವಣಿಗೆ

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಕೋಲ್ಕತ್ತದ ಲಾಲ್‌ ಬಜಾರ್‌ ಸಮೀಪ ಪ್ರತಿಭಟನಾಕಾರರು ಪೊಲೀಸ್‌ ಜೀಪ್‌ಗೆ ಬೆಂಕಿ ಹಚ್ಚಿದರು
ಕೋಲ್ಕತ್ತದ ಲಾಲ್‌ ಬಜಾರ್‌ ಸಮೀಪ ಪ್ರತಿಭಟನಾಕಾರರು ಪೊಲೀಸ್‌ ಜೀಪ್‌ಗೆ ಬೆಂಕಿ ಹಚ್ಚಿದರು   

ಕೋಲ್ಕತ್ತ : ಭ್ರಷ್ಟಾಚಾರ ಆರೋಪ ಹೊತ್ತ ಟಿಎಂಸಿ ಮುಖಂಡರ ಬಂಧನಕ್ಕೆ ಒತ್ತಾಯಿಸಿ ಪೊಲೀಸ್ ಮುಖ್ಯಕಚೇರಿವರೆಗೆ ಬಿಜೆಪಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಭಾರಿ ಘರ್ಷಣೆ ನಡೆದಿದೆ.

ಕೋಲ್ಕತ್ತದ ವಿವಿಧ ಪ್ರದೇಶಗಳಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಜತೆ ಘರ್ಷಣೆಗಿಳಿದರು. ಗುಂಪು ಚುದರಿಸಲು ಅಶ್ರುವಾಯು, ಜಲಫಿರಂಗಿ ಬಳಸಿದ ಪೊಲೀಸರು, ಕೆಲವೆಡೆ ಲಾಠಿ ಪ್ರಹಾರವನ್ನೂ ಮಾಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಪಕ್ಷದ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.


ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು

ನಗರದ ಹಲವು ಪ್ರದೇಶಗಳಲ್ಲಿ ಕದನ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬ್ಯಾರಿಕೇಡ್ ಮುರಿದು ನುಗ್ಗಲು ಯತ್ನಿಸಿದ  ಪ್ರತಿಭಟನಾಕಾರರನ್ನು ನಿಗ್ರಹಿಸಲು ಪೊಲೀಸರು ತಮ್ಮ ಶಕ್ತಿ ಬಳಸಬೇಕಾಯಿತು. ಎರಡು ದಿನಗಳ ಹಿಂದಷ್ಟೇ ಎಡಪಕ್ಷಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮೆರವಣಿಗೆಗೆ ಬ್ರಬರ್ನ್‌ ಮಾರ್ಗದಲ್ಲಿ ತಡೆ ಒಡ್ಡಲಾಯಿತು. ಆಗ ಪೊಲೀಸರ ಜತೆ ಬಿಜೆಪಿ ಕಾರ್ಯಕರ್ತರು ಘರ್ಷಣೆಗಿಳಿದರು. ಬಿ.ಬಿ ಗಂಗೂಲಿ ವೃತ್ತದಲ್ಲಿ ಉದ್ರಿಕ್ತ ಜನರು ಪೊಲೀಸ್ ಜೀಪ್‌ಗೆ ಬೆಂಕಿ ಹಚ್ಚಿದರು. ಸೆಂಟ್ರಲ್ ಅವೆನ್ಯೂ ಹಾಗೂ ಬೆಂಟಿಂಕ್ಟ್‌ ಬೀದಿಯಲ್ಲಿ ಪೊಲೀಸ್ ಕೆಲವು ಜೀಪ್‌ಗಳನ್ನು ಜಖಂಗೊಳಿಸಲಾಯಿತು.

ತಮ್ಮತ್ತ ಬಾಟಲ್ ಹಾಗೂ ಕಲ್ಲು ತೂರಿದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಮೆಟ್ರೊ ಕೇಂದ್ರ ನಿಲ್ದಾಣದ ನೆಲಮಹಡಿಗೆ ನುಗ್ಗಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ಕೆಲವು ಪ್ರಯಾಣಿಕರು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಮೆಟ್ರೊ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಘಟನೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಪೊಲೀಸರು ಹಳದಿ ಬಣ್ಣದ ಜಾಕೆಟ್ ನೀಡಿದ್ದರು. ಪತ್ರಕರ್ತರನ್ನು ಸುಲಭವಾಗಿ ಗುರುತಿಸಲು ಇದರಿಂದ ಸಾಧ್ಯವಾಯಿತು.  ಕಳೆದ ಬಾರಿ ನಡೆದ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿಯು ಪತ್ರಕರ್ತರನ್ನೂ ಥಳಿಸಿದ್ದರು.  ಬಿಜೆಪಿ ಪ್ರತಿಭಟನೆ ಕಾರಣ ನಗರದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.
*
ಮನವಿ ನೀಡಲು ತೆರಳುತ್ತಿದ್ದ ನಮ್ಮನ್ನು ತಡೆಯಲು ದೊಡ್ಡ ಸಂಖ್ಯೆಯ ಪೊಲೀಸ್ ಪಡೆ ನಿಯೋಜಿಸಿದ್ದು ಏಕೆ?
ರೂಪಾ ಗಂಗೂಲಿ
ಬಿಜೆಪಿ ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT