ADVERTISEMENT

ಪೌರಕಾರ್ಮಿಕರ ಮಕ್ಕಳಿಗೆ ನೇರ ಪ್ರವೇಶ

​ಪ್ರಜಾವಾಣಿ ವಾರ್ತೆ
Published 30 ಮೇ 2014, 20:13 IST
Last Updated 30 ಮೇ 2014, 20:13 IST

ಬೆಂಗಳೂರು: ‘ಪೌರಕಾರ್ಮಿಕರ ಮಕ್ಕಳಿಗೆ ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಮೊರಾರ್ಜಿ ದೇಸಾಯಿ ಮತ್ತು ನವೋದಯ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸದೆ ನೇರ ಪ್ರವೇಶ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಘೋಷಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರ ಮತ್ತು ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರವು ನಗರದ ಗಾಂಧಿಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಲ ಹೊರುವ ಪದ್ಧತಿಯಲ್ಲಿ ತೊಡಗಿರುವ ಸಮುದಾಯಗಳ ಸಮಸ್ಯೆಗಳು– ಸವಾಲುಗಳು, ಪುನರ್ವಸತಿ ಹಾಗೂ ಮಲ ಹೊರುವ ಪದ್ಧತಿ ಸಂಪೂರ್ಣ ನಿಷೇಧ’ದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿ­ದರು.

‘ಪೌರಕಾರ್ಮಿಕರ ಮಕ್ಕಳಿಗೆ ಈ ಶಾಲೆಗಳಲ್ಲಿ ಯಾವುದೇ ತರಹದ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಎಷ್ಟು ಮಕ್ಕಳು ಬಂದರೂ ಅವರಿಗೆ ಪ್ರವೇಶ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಸಫಾಯಿ ಕರ್ಮಚಾರಿ ಆಯೋಗಕ್ಕೆ ಶೀಘ್ರದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಪೌರಕಾರ್ಮಿ­ಕರೊಬ್ಬರನ್ನು  ಆಯೋಗದ ಸದಸ್ಯರಾಗಿ ನೇಮಕ ಮಾಡಲಾಗುವುದು’ ಎಂದರು.

‘ಹೊರಗುತ್ತಿಗೆ ಪೌರಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುವುದು. ಅವರ ಕೆಲಸವನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪೌರ­ಕಾರ್ಮಿಕರ ಖಾಲಿಯಿರುವ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

‘ಪೌರಕಾರ್ಮಿಕರಿಗೆ ವಿಐಪಿ ಕಾರ್ಡ್‌ ನೀಡಿ, ಅವರಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇದನ್ನು ಜಾರಿಗೆ ತರಲೇಬೇಕೆಂಬುದು ನನ್ನ ಸಂಕಲ್ಪ’ ಎಂದು ಹೇಳಿದರು.

ಸಂವೇದನ ರಹಿತ ಸಮಾಜ: ಸಾಹಿತಿ ದೇವನೂರ ಮಹಾದೇವ ಮಾತನಾಡಿ, ‘ಇದು ಸಂವೇದನ ರಹಿತ ಸಮಾಜ. ಮಲ ಹೊರುವವರ ಸಮಸ್ಯೆ ನಿವಾರಣೆಗೆ ಸರ್ಕಾರ ಸಂವೇದನೆಯಿಂದ ಸ್ಪಂದಿಸಬೇಕು. ಈ ಅನಿಷ್ಠ ಪದ್ಧತಿಯನ್ನು ಸಮಾಜದಿಂದ ತೊಡೆದು ಹಾಕುವ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.

‘ಅವರ ಮನೆಯ ಕಕ್ಕಸನ್ನು ಅವರೇ ಸ್ವಚ್ಛ ಮಾಡಿಕೊಳ್ಳು­ವಂತೆ ಸರ್ಕಾರ ಆದೇಶ ನೀಡಬೇಕು. ರಾಜ್ಯದೆಲ್ಲೆಡೆ ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಯಂತ್ರಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.