ADVERTISEMENT

ಪ್ರಚಾರಕ್ಕೆ ರೂ187 ಕೋಟಿ ವೆಚ್ಚ!

ಯುಪಿಎ–2 ಸರ್ಕಾರದಿಂದ ಭಾರತ ನಿರ್ಮಾಣ ಜಾಹೀರಾತು

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 19:30 IST
Last Updated 1 ಜೂನ್ 2014, 19:30 IST

ನವದೆಹಲಿ (ಪಿಟಿಐ): ‘ಭಾರತ ನಿರ್ಮಾಣ’ ಪ್ರಚಾರಾಂದೋಲನಕ್ಕಾಗಿ ಯುಪಿಎ ಸರ್ಕಾರ ಚುನಾವಣಾ ವರ್ಷವಾದ 2013–14ನೇ ಸಾಲಿ­ನಲ್ಲಿ ರೂ187 ಕೋಟಿಯಷ್ಟು ಭಾರಿ ಮೊತ್ತವನ್ನು ವೆಚ್ಚ ಮಾಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿಯ  (ಆರ್‌ಟಿಐ) ಅರ್ಜಿಗೆ  ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶ­ನಾ­ಲಯ (ಡಿಎವಿಪಿ) ನೀಡಿರುವ ಉತ್ತರ­ದಿಂದ ಇದು ಬಹಿರಂಗಗೊಂಡಿದೆ.

2012–13ನೇ ಸಾಲಿನಲ್ಲಿ ಈ ಪ್ರಚಾರಾಂದೋಲನಕ್ಕೆ ರೂ100.95 ಕೋಟಿ, 2011–12ನೇ ಸಾಲಿನಲ್ಲಿ ರೂ86 ಕೋಟಿ ಮತ್ತು 2010–11ನೇ ಸಾಲಿನಲ್ಲಿ ರೂ47 ಕೋಟಿಗಳಷ್ಟು ಮೊತ್ತವನ್ನು ವೆಚ್ಚ ಮಾಡಲಾಗಿದೆ ಎಂದು ಸರ್ಕಾರಿ ಜಾಹೀರಾತಿನ ಸಮನ್ವಯ ಸಂಸ್ಥೆಯಾದ ಡಿಎವಿಪಿ ವಿವರ ನೀಡಿದೆ.

ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ 2003–04ನೇ ಸಾಲಿನಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಪ್ರಚಾರಾಂದೋಲನಕ್ಕೆ ಮಾಡಿರುವ ವೆಚ್ಚದ ಮಾಹಿತಿ ಲಭ್ಯವಿಲ್ಲ ಎಂದು ಡಿಎವಿಪಿ ತಿಳಿಸಿದೆ.

‘ಭಾರತ ಪ್ರಕಾಶಿಸುತ್ತಿದೆ’ ಮತ್ತು ‘ಮೇರಾ ಭಾರತ್‌ ಮಹಾನ್‌’ ಪ್ರಚಾರಾಂದೋಲನಗಳ ಖರ್ಚು–ವೆಚ್ಚ ಕುರಿತ ದಾಖಲೆಗಳು
ಲಭ್ಯವಿಲ್ಲ. 2007ರ ನಂತರದ ದಾಖಲೆಗಳಷ್ಟೇ ಕಂಪ್ಯೂಟರೀ ಕರಣಗೊಂಡಿವೆ ಎಂದು  ಆರ್‌ಟಿಐ ಕಾರ್ಯಕರ್ತ ಸುಭಾಷ್‌ ಅಗರ್‌ವಾಲ್‌ ಅವರು ಸಲ್ಲಿಸಿದ ಅರ್ಜಿಗೆ ಡಿಎವಿಪಿ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.