ADVERTISEMENT

ಪ್ರಚಾರದ ಗೀಳಿಗೆ ಸರ್ಕಾರದ ನಿಧಿ ಪೋಲು: ಕೇಂದ್ರದ ವಿರುದ್ಧ ಆನಂದ್‌ ಶರ್ಮಾ ಟೀಕಾಪ್ರಹಾರ

ಪಿಟಿಐ
Published 25 ಮೇ 2017, 13:37 IST
Last Updated 25 ಮೇ 2017, 13:37 IST
ಆನಂದ್ ಶರ್ಮಾ (ಸಾಂದರ್ಭಿಕ ಚಿತ್ರ)
ಆನಂದ್ ಶರ್ಮಾ (ಸಾಂದರ್ಭಿಕ ಚಿತ್ರ)   

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ಸ್ವೀಕರಿಸಿ ಮೂರು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಯೋಜಿಸಲು ಉದ್ದೇಶಿಸಲಾಗಿರುವ ‘ಮೋದಿಫೆಸ್ಟ್‌’ ಕಾರ್ಯಕ್ರಮಕ್ಕೆ ಎಐಸಿಸಿ ಹಿರಿಯ ವಕ್ತಾರ ಆನಂದ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, ‘ಪ್ರಚಾರದ ಗೀಳಿಗೆ ಬಿಜೆಪಿಯು ಸರ್ಕಾರದ ಖಜಾನೆಯನ್ನು ದುರುಪಯೋಗಪಡಿಸುತ್ತಿದೆ. ಪ್ರಧಾನಿಯವರ ವ್ಯಕ್ತಿತ್ವ ಪ್ರಚಾರಕ್ಕಾಗಿ ಕೇಂದ್ರದ ನಿಧಿಯಿಂದ ಸುಮಾರು ₹ 1,500 ಕೋಟಿ ಖರ್ಚು ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಸರ್ಕಾರ ಹಳೆಯ ಮಾನದಂಡದ ಪ್ರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆನಂದ್ ಶರ್ಮಾ ಆಗ್ರಹಿಸಿದ್ದಾರೆ.

ADVERTISEMENT

‘ದೇಶದ ಆರ್ಥಿಕತೆ ಜಡವಾಗಿದೆ. ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಹೂಡಿಕೆ ಹರಿದುಬರುತ್ತಿಲ್ಲ. ಬ್ಯಾಂಕ್‌ ಉಳಿತಾಯ ದರ ಮತ್ತು ಕೃಷಿಯೇತರ ಸಾಲದ ಪ್ರಮಾಣ ಕುಸಿಯುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದುವರೆಗೆ ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ ಎಂಬುದನ್ನೂ ಸರ್ಕಾರ ಬಹಿರಂಗಪಡಿಸಬೇಕು. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಎನ್‌ಡಿಎ ಭರವಸೆ ನೀಡಿತ್ತು. ಆದರೆ, ಇದುವರೆಗೆ ಕೇವಲ 1.5 ಲಕ್ಷ ಉದ್ಯೋಗಾವಕಾಶ ಸೃಷ್ಟಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ದೇಶದ ಆಂತರಿಕ ಭದ್ರತೆ ವಿಚಾರವಾಗಿಯೂ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ ಮಾಡಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ಸರ್ಕಾರದ ನೀತಿಯನ್ನು ‘ರಾಜತಾಂತ್ರಿಕ ವಿಪತ್ತು’ ಎಂದು ಕಾಂಗ್ರೆಸ್‌ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.