ADVERTISEMENT

ಪ್ರತಿಪಕ್ಷ ಸ್ಥಾನ: ಸ್ಪೀಕರ್‌ಗೆ ಕಾಂಗ್ರೆಸ್‌ ಪತ್ರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 20:04 IST
Last Updated 6 ಜೂನ್ 2014, 20:04 IST

ನವದೆಹಲಿ: ಲೋಕಸಭೆಯಲ್ಲಿ ಯುಪಿಎ ಮೈತ್ರಿಕೂಟಕ್ಕೆ ವಿರೋಧ ಪಕ್ಷದ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್‌ ಸ್ಪೀಕರ್‌ಗೆ ಅಧಿಕೃತವಾಗಿ ಪತ್ರ ಬರೆದಿದೆ.

ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನ­ಮಾನ ಸಿಗಬೇಕಾದರೆ ಒಟ್ಟಾರೆ ಬಲ­ದಲ್ಲಿ ಶೇ. ಹತ್ತರಷ್ಟು ಸದಸ್ಯರಿರಬೇಕು. ಲೋಕಸಭೆ ಸದಸ್ಯರ ಸಂಖ್ಯೆ 543. ವಿರೋಧ ಪಕ್ಷದ ಮಾನ್ಯತೆ ಪಡೆಯುವ ಪಕ್ಷಕ್ಕೆ ಕನಿಷ್ಠ 55 ಸ್ಥಾನಗಳು ಇರ­ಬೇಕು. ಆದರೆ, ಕಾಂಗ್ರೆಸ್‌ ಗೆದ್ದಿರು­ವುದು ಕೇವಲ 44 ಸ್ಥಾನಗಳನ್ನು ಮಾತ್ರ. ಇದರಿಂದ ಅತಂತ್ರ ಸ್ಥಿತಿ ಎದುರಾಗಿದೆ.

ಯುಪಿಎ ಮೈತ್ರಿಕೂಟದ ಸದಸ್ಯರ ಸಂಖ್ಯೆ 64 ಇರುವುದರಿಂದ ವಿರೋಧ ಪಕ್ಷದ ಮಾನ್ಯತೆ ನೀಡಬೇಕು.  ಅಲ್ಲದೆ, ಈ ಮೈತ್ರಿಕೂಟ ಚುನಾವಣೆಗೆ ಮೊದಲೇ ರಚನೆ ಆಗಿರುವ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಕಾಂಗ್ರೆಸ್‌ ಪತ್ರದ ಮೇಲೆ ಲೋಕ­ಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ತೀರ್ಮಾನ ಕೈಗೊಳ್ಳಬೇಕಿದೆ. ಶುಕ್ರ­ವಾರ ಸ್ಪೀಕರ್‌ ಹುದ್ದೆಗೆ ಆಯ್ಕೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾ­ಡಿದ ಮಹಾಜನ್‌ ಈ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು. ಅಕಸ್ಮಾತ್‌ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಮಾನ್ಯತೆ ಸಿಕ್ಕರೆ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೊಣೆಗಾರಿಕೆ ಇನ್ನೂ ಹೆಚ್ಚಲಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ಸದ­ಸ್ಯರ ಸಂಖ್ಯೆ 44. ಎನ್‌ಸಿಪಿ, ಆರ್‌ಜೆಡಿ ಮತ್ತಿತರ ಮಿತ್ರ ಪಕ್ಷಗಳು ಒಟ್ಟು­ಗೂಡಿ­ದರೆ ಈ ಸಂಖ್ಯೆ 64 ಆಗಲಿದೆ. ಶೇ. 10ಕ್ಕಿಂತಲೂ ಕಡಿಮೆ ಸ್ಥಾನ ಹೊಂದಿ­ರುವ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನಮಾನ ಸಿಗುವುದೇ ಎಂಬ ಚರ್ಚೆ ಫಲಿತಾಂಶ ಹೊರಬಂದ ದಿನ­ದಿಂದಲೂ ನಡೆಯುತ್ತಿದೆ.

ಸಂಸತ್‌ ಕಾಯ್ದೆ–77ರ ಅನ್ವಯ ವಿರೋಧ ಪಕ್ಷದ ನಾಯಕನ ಸಂಬಳ ಮತ್ತು ಭತ್ಯೆ ನಿಯಮ ಉಲ್ಲೇಖಿಸಿ ಕಾಂಗ್ರೆಸ್‌ ವಿರೋಧ ಪಕ್ಷದ ಮಾನ್ಯತೆ ಪಡೆಯಬಹುದಾಗಿದೆ ಎಂಬ ವಾದವೂ ಇದೆ. ಲೋಕಸಭೆಯಲ್ಲಿ ಸರ್ಕಾರವನ್ನು ಎದುರಿಸುವ ದೊಡ್ಡ ಪಕ್ಷ ಅಥವಾ ಅದರ ನಾಯಕನಿಗೆ ಸ್ಪೀಕರ್‌ ವಿರೋಧ ಪಕ್ಷದ ಸ್ಥಾನಮಾನ ನೀಡಬಹು­ದಾ­ಗಿದೆ. ಸಂಸತ್ತಿನ ನಡಾವಳಿ ಹಾಗೂ ಕಾನೂನು ಅಂಶಗಳನ್ನು ಪರಿಶೀಲಿಸಿದ ಬಳಿಕ ಸ್ಪೀಕರ್‌ ಸೂಕ್ತ ನಿರ್ಧಾರ ಕೈಗೊಳ್ಳ­ಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, 1998ರಲ್ಲಿ ಅಂಗೀಕ­ರಿಸ­ಲಾಗಿರುವ ‘ಮಾನ್ಯತೆ ಪಡೆದ ಪಕ್ಷಗಳ ಮುಖ್ಯ ಸಚೇತಕರು ಮತ್ತು ನಾಯಕರ ಕಾಯ್ದೆ’ ಅನ್ವಯ ವಿರೋಧ ಪಕ್ಷದ ಸ್ಥಾನಮಾನ ಪಡೆಯುವ ಪಕ್ಷದ ಬಲ 55 ಇರಲೇಬೇಕು.

ಲೋಕಪಾಲ, ಕೇಂದ್ರ ಜಾಗೃತ ದಳದ ಕಮಿಷನರ್‌ ಹಾಗೂ ಮುಖ್ಯ ಮಾಹಿತಿ ಕಮಿಷನರ್‌ನಂಥ ಸಂವಿಧಾ­ನಾತ್ಮಕ ಹುದ್ದೆಗಳ ನೇಮಕಾತಿಯಲ್ಲಿ ವಿರೋಧ ಪಕ್ಷದ ಪಾತ್ರವೂ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಮಾನ್ಯತೆ ದೊರೆಯು­ವುದೇ ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.