ADVERTISEMENT

ಪ್ರತ್ಯೇಕತಾವಾದಿಗಳ ಜಾಲ ಭೇದಿಸಿದ ಪೊಲೀಸರು: 20 ಮೊಬೈಲ್ ವಶ

ಬಾರಾಮುಲ್ಲಾ ಕಾರಾಗೃಹದ ಮೇಲೆ ಹಠಾತ್‌ ದಾಳಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST

ಶ್ರೀನಗರ: ಬಾರಾಮುಲ್ಲಾ ಉಪ ಕಾರಾಗೃಹದಲ್ಲಿ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ರತ್ಯೇಕತಾವಾದಿಗಳ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಪತ್ತೆ ಹಚ್ಚಿದ್ದಾರೆ.

ಮೊಬೈಲ್ ಫೋನ್‌ಗಳನ್ನು ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರಾಗೃಹದ ಮೇಲೆ ಹಠಾತ್‌ ದಾಳಿ ನಡೆಸಿದ ಪೊಲೀಸರು 20 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಅವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಜೈಲಿನಲ್ಲಿರುವ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಲ್ಲಿರುವ ತಮ್ಮ ಜಾಲದ ಸದಸ್ಯರನ್ನು ಸಂಪರ್ಕಿಸಲು ಮೊಬೈಲ್‌ ಮತ್ತು ವಾಟ್ಸ್‌ಆ್ಯಪ್‌ ಬಳಸುತ್ತಿದ್ದರು. ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆ, ಹಿಂಸಾಚಾರ ಮತ್ತು ಕಲ್ಲು ತೂರಾಟದಂತಹ ವಿಧ್ವಸಂಕ ಕೃತ್ಯಗಳಿಗೆ ಜೈಲಿನಿಂದಲೇ ಸಲಹೆ, ಸೂಚನೆ ನೀಡಲು ಮೊಬೈಲ್‌ಗಳನ್ನು ಬಳಸಲಾಗುತಿತ್ತು. ಪಾಕಿಸ್ತಾನ ಮತ್ತು ಕಾಶ್ಮೀರದ ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರ ಜತೆ ಕೈದಿಗಳು ಮೊಬೈಲ್‌ ಮೂಲಕ ನಿರಂತರ ಸಂಪರ್ಕ ಹೊಂದಿರುವ ಶಂಕೆ ಇದೆ.

ADVERTISEMENT

ಕೈದಿಗಳಿಗೆ ಮೊಬೈಲ್ ಫೋನ್‌ ಒದಗಿಸಿದ್ದು ಯಾರು ಎಂಬ ಪ್ರಶ್ನೆ ಎದುರಾಗಿದ್ದು, ಈ ಕೃತ್ಯದಲ್ಲಿ ಜೈಲು ಸಿಬ್ಬಂದಿ ಶಾಮೀಲಾಗಿರುವ ಶಂಕೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಇದೇ ಜೈಲಿನ ಮೇಲೆ ದಾಳಿ ನಡೆಸಿದ್ದ ಪೊಲೀಸರು ಕೈದಿಗಳಿಂದ 16 ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದರು. ಆ ಪೈಕಿ ಎರಡು ಫೋನ್‌ ಪ್ರತ್ಯೇಕತಾವಾದಿ ನಾಯಕ ಮಸರತ್‌ ಅಲಂಗೆ ಸೇರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.