ADVERTISEMENT

ಪ್ರತ್ಯೇಕ ವಾಯುದಾಳಿ ಕೇರಳದ ಇಬ್ಬರು ಬಲಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2017, 19:30 IST
Last Updated 30 ಏಪ್ರಿಲ್ 2017, 19:30 IST
ತಿರುವನಂತಪುರ/ಕಾಸರಗೋಡು: ಕಳೆದ ವರ್ಷ ಉಗ್ರರ ಗುಂಪಿಗೆ ಸೇರಿದ್ದರು ಎನ್ನಲಾದ ಕೇರಳದ ಇಬ್ಬರು ಯುವಕರು ಸಿರಿಯಾ ಮತ್ತು ಆಫ್ಘಾನಿಸ್ತಾನಗಳಲ್ಲಿ ನಡೆದ ಪ್ರತ್ಯೇಕ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
 
ಯುವಕರನ್ನು  ಅಬು ತಾಹೀರ್‌ ಹಾಗೂ ಪಾಲ್ಘಾಟಿನ ಬೆಸ್ಟಿನ್‌ ಯಾನೆ ಯಾಹ್ಯಾ ಎಂದು ಗುರುತಿಸಲಾಗಿದೆ.
 
ಅಬು ತಾಹೀರ್‌ ಸಿರಿಯಾದಲ್ಲಿ ಸಾವನ್ನಪ್ಪಿರುವ ಬಗ್ಗೆ ಕತಾರ್‌ನಲ್ಲಿರುವ ಅವರ ಸಂಬಂಧಿಕರೊಬ್ಬರಿಗೆ ಧ್ವನಿ ಸಂದೇಶ  ಸಿಕ್ಕಿದ್ದು ಅವರು ಪೋಷಕರಿಗೆ ವಿಷಯ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸಂದೇಶ ಎಲ್ಲಿಂದ ಬಂದಿದೆ ಎಂಬುದು ಖಚಿತವಾಗಿಲ್ಲ.
 
ಪಾಲಕ್ಕಾಡ್‌ನ ಪತ್ರಿಕೆಯಲ್ಲಿ ತರಬೇತಿ ಪಡೆಯುತ್ತಿದ್ದ ತಾಹೀರ್‌, 2013ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದ.  ಅಲ್ಲಿಂದ ನಾಪತ್ತೆಯಾಗಿದ್ದ. ಹಲವು ದಿನಗಳ ಬಳಿಕ ಅಲ್‌ ಖೈದಾ ಸಂಘಟನೆಗೆ ಸೇರ್ಪಡೆಗೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದ. ಧ್ವನಿ ಸಂದೇಶದ ಕುರಿತಂತೆ ಪೊಲೀಸ್‌ ಹಾಗೂ ಗುಪ್ತಚರ ಇಲಾಖೆಗೆ ಮಾಹಿತಿ ನೀಡಲಾಗಿದೆ.
 
ಇನ್ನೊಬ್ಬ ಯುವಕ ಪಾಲ್ಘಾಟಿನ ಯಾಹ್ಯಾ, ಐಎಸ್‌ ಸಂಘಟನೆ ಸಕ್ರಿಯವಾಗಿರುವ ಆಫ್ಘಾನಿಸ್ತಾನದ ನಂಗರ್ ಹಾರ್‌ಗೆ ಹೋಗಿದ್ದ. ಕೇರಳದ 22 ಮಂದಿಯ ತಂಡದಲ್ಲಿದ್ದ.
 
ಈಗ ಆತ ಆಫ್ಘಾನಿಸ್ತಾನದಲ್ಲಿ ಸತ್ತಿರುವ ಬಗ್ಗೆ ತಂಡದ ಸದಸ್ಯನಾದ ಅಶ್ಫಾಕ್ ಮಜೀದ್ ಎಂಬಾತ ಶನಿವಾರ ಸಂಜೆ ಸಂದೇಶ ಕಳುಹಿಸಿದ್ದಾನೆ. ಐಎಸ್ ತಾಣಕ್ಕೆ ತೆರಳಿರುವ ಪೈಕಿ, ಹಫೀಸುದ್ದೀನ್ ಮತ್ತು ಮುರ್ಶಿದ್ ಮುಹಮ್ಮದ್ ಎಂಬವರು  ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಹತರಾಗಿದ್ದರು. ಈ ಸಂದೇಶವನ್ನೂ ಅಶ್ಫಾಕ್ ಮಜೀದ್  ಕಳುಹಿಸಿದ್ದ .
 
ಯಾಹ್ಯಾ ಮತ್ತು ಆತನ ತಮ್ಮ ಈಸಾ ಕ್ರೈಸ್ತ ಮತದಿಂದ ಇಸ್ಲಾಂಗೆ ಮತಾಂತರಗೊಂಡವರು. ಇವರಿಬ್ಬರೂ ತಮ್ಮ ಪತ್ನಿಯರ ಸಮೇತ ಐಎಸ್ ಉಗ್ರಗಾಮಿ ಶಿಬಿರಕ್ಕೆ ತೆರಳಿದ್ದರು.
 
ಈಸಾನ ಪತ್ನಿ ನಿಮಿಷ ಯಾನೆ ಫಾತೀಮಾ ತಿರುವನಂತಪುರ ನಿವಾಸಿಯಾಗಿದ್ದು, ಕಾಸರಗೋಡಿನ  ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.