ADVERTISEMENT

ಪ್ರಾಧಿಕಾರ ರಚನೆಗೆ ರಾಜ್ಯದ ವಿರೋಧ

ಸಾರಿಗೆ ನಿಗಮಗಳ ಪಾಲಿಗೆ ‘ಮರಣ ಶಾಸನ’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಮೋಟಾರು ವಾಹನ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ’ಯು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಪಾಲಿಗೆ ‘ಮರಣ ಶಾಸನ’ ಆಗಲಿದೆ ಎಂದು ಕರ್ನಾಟಕ ಆತಂಕ ವ್ಯಕ್ತಪಡಿಸಿದೆ.

ಹೊಸ ಕಾಯ್ದೆ ಅನುಷ್ಠಾನಗೊಂಡರೆ ಸಾರಿಗೆ ನಿಗಮಗಳ ಏಕಸ್ವಾಮ್ಯಕ್ಕೆ ಭಂಗ ಬರಲಿದೆ. ಎಲ್ಲ ಮಾರ್ಗಗಳೂ ಖಾಸಗಿಗೆ ತೆರೆದುಕೊಳ್ಳುವುದರಿಂದ ಸಾರಿಗೆ ನಿಗಮ­ಗಳು ಮುಚ್ಚಿಹೋಗುವ ಅಪಾಯವಿದೆ ಎಂದು ರಾಜ್ಯ ಸಾರಿಗೆ ಸಚಿವ ಎ. ರಾಮ ಲಿಂಗಾರೆಡ್ಡಿ ಮಂಗಳವಾರ ಕಳ­ವಳ ವ್ಯಕ್ತ ಪಡಿಸಿದ್ದಾರೆ. ಕರ್ನಾಟಕ ವ್ಯಕ್ತಮಾಡಿದ ಆತಂಕಕ್ಕೆ ನೆರೆಯ ಕೇರಳ ಮತ್ತು ತಮಿಳುನಾಡು ಕೂಡ ದನಿಗೂಡಿಸಿವೆ.

ಕೇಂದ್ರ ಸಾರಿಗೆ ಸಚಿವಾಲಯ ಕರೆದಿದ್ದ ‘ರಾಷ್ಟ್ರೀಯ ಸಾರಿಗೆ ಅಭಿವೃದ್ಧಿ ಮಂಡಳಿ’ ಸಭೆಯಲ್ಲಿ ಮಾತನಾಡಿದ ರಾಮಲಿಂಗಾ­ರೆಡ್ಡಿ, ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ ಪ್ರತಿ ದಿನ 25 ಸಾವಿರಕ್ಕೂ ಹೆಚ್ಚು ಬಸ್ಸುಗಳು ಓಡುತ್ತಿವೆ. 1.5 ಲಕ್ಷಕ್ಕೂ ಹೆಚ್ಚು ನೌಕರರು ದುಡಿಯು­ತ್ತಿದ್ದಾರೆ. ರಾಷ್ಟ್ರೀಯ ಸಾರಿಗೆ ಪ್ರಾಧಿಕಾರ ರಚನೆಯಾದರೆ ಎಲ್ಲ ನಿಗಮಗಳು ಅದರ ವ್ಯಾಪ್ತಿಗೊಳಪಡಲಿದೆ. ರಾಜ್ಯದ ನಿಯಂತ್ರಣ ತಪ್ಪಲಿದೆ ಎಂದರು.

ರಾಜ್ಯದಲ್ಲಿ ಶೇ 70ರಷ್ಟು ಮಾರ್ಗ­ಗಳಲ್ಲಿ ಸಾರಿಗೆ ಬಸ್ಸುಗಳು ಸಂಚರಿಸು­ತ್ತಿವೆ. ಉಳಿದ ಶೇ 30ರಷ್ಟು ಮಾರ್ಗ­ಗಳಲ್ಲಿ ಖಾಸಗಿಯವರಿಗೆ ಅನುಮತಿ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮಂಡ್ಯ ಸೇರಿದಂತೆ ಹದಿನೇಳು ಜಿಲ್ಲೆಗಳಲ್ಲಿ ಅದರಲ್ಲೂ ಸರ್ಕಾರಿ ಬಸ್ಸು­ಗಳು ಓಡಾಡದ ಗ್ರಾಮೀಣ ಪ್ರದೇಶ­ಗಳಲ್ಲಿ ಖಾಸಗಿಯವರಿಗೆ ಅನುಮತಿ ಕೊಡಲಾಗಿದೆ ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದರು.
ಲಾಭದಲ್ಲಿ: ದೇಶದಾದ್ಯಂತ 54 ಸಾರಿಗೆ ನಿಗಮ­ಗಳಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಮುಂಬೈ ಮಹಾನಗರ ಸಾರಿಗೆ ಸೇರಿದಂತೆ ಮೂರು ನಿಗಮಗಳು ಲಾಭದಲ್ಲಿವೆ.

ಉಳಿದವು ನಷ್ಟದಲ್ಲಿವೆ. ಕೇಂದ್ರ ಸರ್ಕಾರ ಹೊಸ ಕಾಯ್ದೆ ಅಂಗೀಕರಿಸಿದರೆ ಪ್ರಯಾಣ ದರ ನಿಗದಿ ಮಾಡುವ ಅಧಿಕಾರ ರಾಷ್ಟ್ರೀಯ ಸಾರಿಗೆ ಪ್ರಾಧಿಕಾರದ ಪಾಲಾಗಲಿದೆ. ಅಂತರ ರಾಜ್ಯ ಪರವಾನಗಿ ವಿತರಣೆ ಅಧಿಕಾ­ರವೂ ಪ್ರಾಧಿಕಾರದ ಕೈಗೆ ಹೋಗಲಿದೆ. ರಾಜ್ಯ ಸರ್ಕಾರದ ಕೈಯಲ್ಲಿ ಯಾವುದೇ ಅಧಿಕಾರವೂ ಉಳಿಯುವುದಿಲ್ಲ.

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಸಮ್ಮುಖದಲ್ಲಿ ನಡೆದ ರಾಷ್ಟ್ರೀಯ ಸಾರಿಗೆ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಉದ್ದೇಶಿತ ಮಸೂದೆಯನ್ನು ಮಂಡಿಸಿ­ದಾಗ, ರಾಮಲಿಂಗಾರೆಡ್ಡಿ ವಿರೋಧಿ­ಸಿದರು. ಹೊಸ ಸಾರಿಗೆ ಮಸೂದೆ ಅಂಗೀಕರಿಸುವ ಮೊದಲು ಸಾರಿಗೆ ನಿಗಮಗಳ ರಕ್ಷಣೆಗೆ ಕೇಂದ್ರ ಕ್ರಮ ಕೈಗೊಳ್ಳಬೇಕು ಎಂಬ ನಿಲುವನ್ನು   ವ್ಯಕ್ತಪಡಿಸಿದರು. ಕೇರಳ ಮತ್ತು ತಮಿಳು­ನಾಡು ಕೂಡಾ ರಾಜ್ಯದ ವಾದವನ್ನು ಬಲವಾಗಿ ಬೆಂಬಲಿಸಿವೆ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವ ‘ಸ್ಟೇಜ್‌ ಕ್ಯಾರಿ­ಯರ್‌’ ಬಸ್ಸುಗಳು ಇದುವರೆಗೂ ಮಧ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿ­ಕೊಳ್ಳಲು ಅವಕಾಶವಿರಲಿಲ್ಲ. ರಾಷ್ಟ್ರೀಯ ಸಾರಿಗೆ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ರಸ್ತೆ ಮಧ್ಯದಲ್ಲೂ ಪ್ರಯಾಣಿಕರನ್ನು ಹತ್ತಿಸಿ­ಕೊಳ್ಳಬಹುದು. ಸ್ಟೇಜ್‌ ಕ್ಯಾರಿ­ಯರ್‌ ಮತ್ತು ಒಪ್ಪಂದದ ಮೇಲೆ ಬಸ್ಸುಗಳನ್ನು ಕೊಡುವ ಅಧಿಕಾರವೂ ರಾಜ್ಯದ ಕೈಯಲ್ಲಿ ಉಳಿಯುವುದಿಲ್ಲ.

ಕರ್ನಾಟಕ, ಕೇರಳ ಮತ್ತು ತಮಿಳುನಾಡು  ರಾಜ್ಯಗಳ ವಿರೋಧದ ನಡು­­ವೆಯೂ ರಾಷ್ಟ್ರೀಯ ಸಾರಿಗೆ ಪ್ರಾಧಿಕಾರ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸಚಿವ ಸಂಪುಟದ ಒಪ್ಪಿಗೆಯ ಬಳಿಕ ‘ಮೋಟಾರು ವಾಹನ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಪ್ರಾಧಿಕಾರ ಮಸೂದೆ– 2014’ ಅನ್ನು ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಮಂಡನೆ ಮಾಡುವುದಾಗಿ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಸಾರಿಗೆ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಸಾರಿಗೆ ಕಮಿಷನರ್‌ ರಾಮೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT