ADVERTISEMENT

ಫ್ಲ್ಯಾಟ್‌ ನೀಡದೆ ಸತಾಯಿಸಿದ ರಿಯಲ್‌ ಎಸ್ಟೇಟ್‌ ಕಂಪೆನಿಗೆ ನೋಟಿಸ್‌

ರಾಷ್ಟ್ರೀಯ ಗ್ರಾಹಕರ ಆಯೋಗಕ್ಕೆ ದೂರು ನೀಡಿದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:35 IST
Last Updated 22 ಜುಲೈ 2017, 19:35 IST

ನವದೆಹಲಿ: ಫ್ಲ್ಯಾಟ್‌ ಖರೀದಿಗಾಗಿ ಹಣ  ಸಂದಾಯ ಮಾಡಿರುವ ಗ್ರಾಹಕರಿಗೆ ಮೂರು ವರ್ಷಗಳಿಂದ ಸತಾಯಿಸುತ್ತಿರುವ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಕಂಪೆನಿಯೊಂದಕ್ಕೆ ರಾಷ್ಟ್ರೀಯ ಗ್ರಾಹಕರ ಆಯೋಗ ನೋಟಿಸ್‌ ಜಾರಿ ಮಾಡಿದೆ.

ಹೈ ಎಂಡ್‌ ಪ್ರೀಮಿಯಂ ಫ್ಲ್ಯಾಟ್‌ ಪಡೆಯಲು ಮೂರು ವರ್ಷಗಳ ಹಿಂದೆಯೇ ₹ 3.85 ಕೋಟಿ ಸಂದಾಯ ಮಾಡಿದ್ದು, ಫ್ಲ್ಯಾಟ್‌ ನೀಡದೆ ಸತಾಯಿಸಲಾಗುತ್ತಿದೆ ಎಂದು ದೂರಿ ಡಾ.ಟುಲಿಪ್‌ ಚಮಾನಿ ಹಾಗೂ ಅವರ ತಾಯಿ ಡಾಫ್ನಿ ಅಲ್ಫೋನ್ಸಿ ಎಂಬುವವರು ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕೆ. ಜೈನ್‌ ನೇತೃತ್ವದ ಆಯೋಗ, ಒಂದು ತಿಂಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಮಿಲೇನಿಯಾ ರಿಯಲ್ಟರ್ಸ್‌ ಪ್ರೈ. ಲಿ ಕಂಪೆನಿಗೆ ನೋಟಿಸ್‌ ನೀಡಿದೆ.

‘ಕಂಪೆನಿಯು ವಿಳಂಬ ನೀತಿ ಅನುಸರಿಸಿದ್ದರಿಂದ ಮಾನಸಿಕ ತಳಮಳ ಹಾಗೂ ದೈಹಿಕ ಹಿಂಸೆ ಅನುಭವಿಸಿರುವ ನಮಗೆ ಫ್ಲ್ಯಾಟ್‌ಗಾಗಿ ಮುಂಗಡವಾಗಿ ನೀಡಿರುವ ₹3.85 ಕೋಟಿ, ಬಡ್ಡಿ ನಷ್ಟದ ₹1.08 ಕೋಟಿ , ಬ್ಯಾಂಕ್‌ಗೆ ಬಡ್ಡಿ ರೂಪದಲ್ಲಿ ನೀಡಿರುವ ₹48 ಲಕ್ಷ, ಬೆಲೆ ಏರಿಳಿತದ  ₹1 ಕೋಟಿ ಹಾಗೂ ಕಾನೂನು ಹೋರಾಟಕ್ಕೆ ವೆಚ್ಚವಾದ ₹75,000 ದೊರಕಿಸಿಕೊಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

ADVERTISEMENT

ಕಂಪೆನಿಯ ಮೇಲೆ ನಂಬಿಕೆ ಇರಿಸಿ 4 ಬೆಡ್‌ ರೂಂ ಸೌಲಭ್ಯವಿರುವ ಫ್ಲ್ಯಾಟ್‌ಗಾಗಿ 2014ರ ಮಾರ್ಚ್‌ನಲ್ಲೇ ಪೂರ್ಣ ಹಣ ಸಂದಾಯ ಮಾಡಲಾಗಿದೆ. ಆದರೆ, ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕಾಗಿ ನೀಡಲಾಗಿದ್ದ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿದರೂ ಹಣ ಮರಳಿಸದೆ ಸತಾಯಿಸಲಾಗಿದೆ ಎಂದು ಅರ್ಜಿದಾರ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ಸಂಜಯ್‌ ನುಲಿ ತಿಳಿಸಿದರು.

ಅನುಮತಿ ರದ್ದಾದ ವಿಷಯ ಮುಚ್ಚಿಟ್ಟ ಕಂಪೆನಿಯು ಹಣ ಹಿಂದಿರುಗಿಸಲು ಹಿಂದೇಟು ಹಾಕಿದೆ. ಬ್ಯಾಂಕ್‌ಗೆ ಮಾಸಿಕ ₹ 1.74 ಲಕ್ಷ ಬಡ್ಡಿ ನೀಡಿರುವ ಅರ್ಜಿದಾರರು, ಮನೆ ದೊರೆಯದ್ದರಿಂದ ಆದಾಯ ತೆರಿಗೆ ವಿನಾಯಿತಿಯಿಂದಲೂ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.

ಕಳೆದ ಸೆಪ್ಟೆಂಬರ್‌ ವೇಳೆಗೆ ಫ್ಲ್ಯಾಟ್‌ ನೀಡುವುದಾಗಿ ವಾಗ್ದಾನ ಮಾಡಿದ್ದ ಕಂಪೆನಿ ಇದುವರೆಗೂ ಮನೆ ನೀಡಿಲ್ಲ. ಇದರಿಂದಾಗಿ ಸಾಲ ನೀಡಿದ ಬ್ಯಾಂಕ್‌ಗೆ ಮಾಸಿಕ ₹ 3 ಲಕ್ಷ ಇಎಂಐ ಹಣವನ್ನೂ ಜಮೆ ಮಾಡಿದ್ದಾರೆ. ಇದರಿಂದಾಗಿ ಆರ್ಥಿಕವಾಗಿ ಸಮಸ್ಯೆಗೆ ಈಡಾಗುವಂತಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.