ADVERTISEMENT

ಬಂಪರ್‌ ಬೆಳೆ ನಿರೀಕ್ಷೆ

ವಿಜಯಕುಮಾರ್ ಸಿಗರನಹಳ್ಳಿ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಬಂಪರ್‌ ಬೆಳೆ ನಿರೀಕ್ಷೆ
ಬಂಪರ್‌ ಬೆಳೆ ನಿರೀಕ್ಷೆ   

ನವದೆಹಲಿ: ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರ, 2017–18ನೇ ಬೆಳೆ ವರ್ಷದಲ್ಲಿ (ಜುಲೈ–ಜೂನ್‌) 27.3 ಕೋಟಿ ಟನ್‌ ಆಹಾರಧಾನ್ಯ ಉತ್ಪಾದನೆಯ ಗುರಿ ಹೊಂದಿದೆ.

‘ಎಲ್ಲವೂ ಅಂದುಕೊಂಡಂತೆ ನಡೆದು ನಿಗದಿತ ಗುರಿ ತಲುಪಿದರೆ ಇದೊಂದು ಸಾರ್ವಕಾಲಿಕ ದಾಖಲೆಯಾಗಲಿದೆ’ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಹೇಳಿದ್ದಾರೆ.  

ಮಂಗಳವಾರ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯತಂತ್ರ ರೂಪಿಸುವ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ADVERTISEMENT

‘ಈ ಬಾರಿ ಮುಂಗಾರು ಮಳೆ ವಾಡಿಕೆ ಪ್ರಮಾಣದಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಉದ್ದೇಶಿತ ಗುರಿ ತಲುಪಬಹುದಾಗಿದೆ.

‘ಅಗತ್ಯವಾದ ಬಿತ್ತನೆ ಬೀಜ ಮತ್ತು ಗೊಬ್ಬರದ ಸಾಕಷ್ಟು ದಾಸ್ತಾನು ಇದೆ. ಕೊರತೆ ಎದುರಾಗದು’ ಎಂದರು.

‘ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ಸೇರಿದಂತೆ ಕೃಷಿ ಸಂಬಂಧಿತ ಎಲ್ಲ ಯೋಜನೆಗಳನ್ನು ಸಕಾಲದಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಕಾಳಜಿ ವಹಿಸಬೇಕು. ಇದರಿಂದ ರೈತರಿಗೆ ಸೂಕ್ತ ಸಮಯದಲ್ಲಿ  ಹಣಕಾಸಿನ ನೆರವು ದೊರೆಯಲಿದೆ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಧಾನ್ಯ ಉತ್ಪಾದನೆ ಕುಸಿತ

ಬೆಂಗಳೂರು: ಭೀಕರ ಬರಗಾಲದಿಂದಾಗಿ  2016–17ನೇ ಸಾಲಿನಲ್ಲಿ ರಾಜ್ಯದಲ್ಲಿ ಆಹಾರ ಧಾನ್ಯ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಂಠಿತವಾಗಿದ್ದು, ನಿರೀಕ್ಷೆಗಿಂತ ಸುಮಾರು 50 ಲಕ್ಷ ಟನ್‌ ಕಡಿಮೆಯಾಗಿದೆ.

ವಾಡಿಕೆ ಮಳೆಯಾಗಿದ್ದರೆ 80.35 ಲಕ್ಷ ಹೆಕ್ಟೇರ್‌ನಲ್ಲಿ 140 ಲಕ್ಷ ಟನ್‌ ಆಹಾರ ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆ ಕೊರತೆಯಿಂದ 72.78 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಅದರಲ್ಲೂ ಶೇ 35ರಿಂದ 40ರಷ್ಟು ಬೆಳೆ ಹಾನಿಯಾಗಿದೆ.

ಕೆಲವು ಪ್ರದೇಶಗಳಲ್ಲಿ ತೇವಾಂಶ ಕೊರತೆಯಾಗಿ ಹೆಕ್ಟೇರ್‌ಗೆ ಕೇವಲ 1,320 ಕೆ.ಜಿ (1,742 ಕೆ.ಜಿ ಗುರಿ)   ಉತ್ಪಾದನೆ ಸಾಧ್ಯವಾಗಿದೆ. ಇದರಿಂದಾಗಿ ಆಹಾರ ಧಾನ್ಯ ಉತ್ಪಾದನೆ 91.48 ಲಕ್ಷ  ಟನ್‌ಗೆ ಕುಸಿದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ  ಮಾಹಿತಿ  ನೀಡಿದರು.

ಮುಂಗಾರಿನಲ್ಲಿ 139 ತಾಲ್ಲೂಕುಗಳಲ್ಲಿ ಮಳೆ ಕೈಕೊಟ್ಟರೆ, ಹಿಂಗಾರಿನಲ್ಲಿ 160 ತಾಲ್ಲೂಕುಗಳು ಬರಗಾಲ ಪರಿಸ್ಥಿತಿ ಇದೆ.

ಬೇಸಿಗೆಯಲ್ಲಿ ಶೇ 40ರಷ್ಟು ಮಾತ್ರ ಬಿತ್ತನೆಯಾಗಿದೆ. ಉತ್ಪಾದನೆ ಕಡಿಮೆ ಆಗಿರುವುದರಿಂದ ಆಹಾರದ ಕೊರತೆ ಎದುರಾಗುವ ಸಾಧ್ಯತೆ ಇಲವಾದರೂ ರೈತರ ಆದಾ ಯದ ಮೇಲೆ ಗಂಭೀರ ಪರಿಣಾಮ ಆಗಲಿದೆ.

ಮುಂದಿನ ಗುರಿ135 ಲಕ್ಷ ಟನ್: ಮುಂದಿನ ವರ್ಷ ವಾಡಿಕೆ ಮಳೆಯಾಗುವ ನಿರೀಕ್ಷೆ ಇದ್ದು, 135 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದ ನೆಯ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.