ADVERTISEMENT

ಬಾಗಿಲು ಮುಚ್ಚುವ ಹಂತದಲ್ಲಿ 120 ಖಾಸಗಿ ಎಂಜಿನಿಯರಿಂಗ್‌ ಕಾಲೇಜು

ಪಿಟಿಐ
Published 30 ಏಪ್ರಿಲ್ 2017, 10:34 IST
Last Updated 30 ಏಪ್ರಿಲ್ 2017, 10:34 IST
ಬಾಗಿಲು ಮುಚ್ಚುವ ಹಂತದಲ್ಲಿ 120 ಖಾಸಗಿ ಎಂಜಿನಿಯರಿಂಗ್‌ ಕಾಲೇಜು
ಬಾಗಿಲು ಮುಚ್ಚುವ ಹಂತದಲ್ಲಿ 120 ಖಾಸಗಿ ಎಂಜಿನಿಯರಿಂಗ್‌ ಕಾಲೇಜು   

ನವದೆಹಲಿ: ದೇಶದ 120 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ಮಹಾರಾಷ್ಟ್ರ, ಗುಜರಾತ್‌ ಮತ್ತು ಹರಿಯಾಣದಲ್ಲಿ ಹೆಚ್ಚಿನ ಕಾಲೇಜುಗಳು ಈ ಸ್ಥಿತಿಯಲ್ಲಿವೆ. ಕರ್ನಾಟಕದ 11 ಕಾಲೇಜುಗಳೂ ಮುಚ್ಚಲಿವೆ.

ಮುಚ್ಚುವ ಹಂತದಲ್ಲಿರುವ ಎಂಜಿನಿಯರಿಂಗ್‌ ಕಾಲೇಜುಗಳು ಪ್ರಸಕ್ತ ಸಾಲಿಗೆ ನೂತನ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸುತ್ತಿಲ್ಲ. ಹಿಂದಿನ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ವ್ಯಾಸಂಗವನ್ನು ಪೂರ್ಣಗೊಳಿಸಲು ಕಾಲೇಜುಗಳು ಅವಕಾಶ ಕಲ್ಪಿಸುತ್ತಿವೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್‌(ಎಐಸಿಟಿಇ) ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ, ಮಹಾರಾಷ್ಟ್ರದ ಪುಣೆ, ನಾಗಪುರ, ಔರಂಗಾಬಾದ್‌, ಜಲಗಾವ್‌ ಮತ್ತು ಕೊಲ್ಲಾಪುರ ಹಾಗೂ ಇತರೆಡೆಗಳ 23 ಕಾಲೇಜುಗಳು 2016–2017ನೇ ಸಾಲಿನಲ್ಲಿ ಬಾಗಿಲು ಮುಚ್ಚಿವೆ.

ADVERTISEMENT

ಅಸ್ತಿತ್ವ ಉಳಿಸಿಕೊಳ್ಳಲಾಗದ ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಅಥವಾ ಪಾಲಿಟೆಕ್ನಿಕ್‌, ವಿಜ್ಞಾನ ಮತ್ತು ಕಲಾ ಕಾಲೇಜುಗಳಾಗಿ ಮಾರ್ಪಾಡಾಗುತ್ತಿವೆ.

ಐಐಟಿ ಮತ್ತು ಎನ್ಐಟಿಗಳು ಹಾಗೂ ಇತರ ಕೇಂದ್ರೀಯ ಅನುದಾನಿತ ಸಂಸ್ಥೆಗಳಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿರುವುದರಿಂದ ಇತರ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಕಡಿಮೆ ಸಂಖ್ಯೆಯ ದಾಖಲಾತಿಯಿಂದ ಸಂಸ್ಥೆಗಳ ಉಳಿವು ಕಷ್ಟವಾಗುತ್ತಿದೆ ಎಂದು ಹಿರಿಯ ಎಐಸಿಸಿಟಿ ಅಧಿಕಾರಿ ಹೇಳಿದ್ದಾರೆ‌.

ಗುಜರಾತಿನಲ್ಲಿ 15 ಎಂಜಿನಿಯರಿಂಗ್‌ ಕಾಲೇಜುಗಳು, ತೆಲಂಗಾಣದಲ್ಲಿ 7, ಕರ್ನಾಟಕದಲ್ಲಿ 11, ಉತ್ತರ ಪ್ರದೇಶದಲ್ಲಿ 12, ಪಂಜಾಬ್‌ನಲ್ಲಿ 6, ರಾಜಸ್ತಾನದಲ್ಲಿ 11 ಮತ್ತು ಹರಿಯಾಣದಲ್ಲಿ 13 ಕಾಲೇಜುಗಳು ಮುಚ್ಚುವ ಹಂತದಲ್ಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ತಾಂತ್ರಿಕ ಕಾಲೇಜು ಮಾತ್ರ ಬಾಗಿಲು ಮುಚ್ಚಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.