ADVERTISEMENT

ಬಾಬಾ ರಾಮ್‌ದೇವ್‌ ವಿರುದ್ಧ ಪ್ರಕರಣ

ರಾಹುಲ್‌ ಕುರಿತ ಹೇಳಿಕೆ -–ಬೇಷರತ್‌ ಕ್ಷಮೆಗೆ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2014, 19:30 IST
Last Updated 26 ಏಪ್ರಿಲ್ 2014, 19:30 IST

ಲಖನೌ/ನವದೆಹಲಿ (ಪಿಟಿಐ): ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ದಲಿತರ ಮನೆಗೆ ‘ಹನಿ­ಮೂನ್‌’­ಗೆ ತೆರಳುತ್ತಾರೆ ಎಂಬ ಬಾಬಾ ರಾಮದೇವ್‌ ಹೇಳಿಕೆ ಈಗ ದೊಡ್ಡ ವಿವಾದ ಸೃಷ್ಟಿಸಿದ್ದು, ರಾಮ್‌­ದೇವ್‌ ವಿರುದ್ಧ ಲಖನೌ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿ­ಕೊಂಡಿದ್ದಾರೆ.

ಈ ಮಧ್ಯೆ, ವಿವಿಧ ರಾಜಕೀಯ ಪಕ್ಷ­ಗಳು ರಾಮ್‌ದೇವ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಕೆಲವು ಕಡೆ ರಾಮ್‌­ದೇವ್‌  ವಿರುದ್ಧ  ಪ್ರತಿಭಟನೆ­ಗಳೂ ನಡೆದಿವೆ.

ರಾಮದೇವ್‌ ಅವರ ಹೇಳಿಕೆ ನಾಚಿಕೆ­ಗೇಡಿನದಾಗಿದ್ದು, ತುಚ್ಛವಾಗಿದೆ ಎಂದು ಕಾಂಗ್ರೆಸ್‌ ಖಂಡಿಸಿದೆ. ರಾಹುಲ್‌ ವಿರುದ್ಧದ ಹೇಳಿಕೆಗಾಗಿ ರಾಮದೇವ್‌ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಬ್ಬರೂ ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಹಣ­ಕಾಸು ಸಚಿವ ಪಿ. ಚಿದಂಬರಂ ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ನ ದಲಿತ ನಾಯಕಿ­ಯ­ರಾದ ಕುಮಾರಿ ಶೆಲ್ಜಾ ಹಾಗೂ ಕೃಷ್ಣಾ ತೀರಥ್‌ ಸಹ ರಾಮದೇವ್‌ ಹೇಳಿಕೆ­ಯನ್ನು ಖಂಡಿಸಿದ್ದು, ದಲಿತ ಮಹಿಳೆ­ಯ­ರನ್ನು ಕೇವಲ ‘ವಸ್ತು’ವಾಗಿ ನೋಡುವ ವಿಕ್ಷಿಪ್ತ ಮನಃಸ್ಥಿತಿ ಇದು ಎಂದು ಟೀಕಿಸಿ­ದ್ದಾರೆ. ಈ ನಡುವೆ ಬಿಜೆಪಿಯು ರಾಮ­ದೇವ್‌ ಅವರನ್ನು ಬೆಂಬಲಿ­ಸಿದ್ದು, ಅವ­ರೊಬ್ಬ ‘ಸಂತ’­ರಾ­ಗಿದ್ದು ಅವರ ಹೇಳಿಕೆ­ಯನ್ನು ಅವರು ಮಾತ­ನಾಡಿದ ರೀತಿ­ಯಲ್ಲಿಯೇ ಗ್ರಹಿಸಬೇಕು ಎಂದು ಹೇಳಿದೆ.

‘ಹನಿಮೂನ್‌’ ಅನ್ನುವುದು ಇಂಗ್ಲಿಷ್‌ ಪದ. ಅವರು ಆ ಪದವನ್ನು ಬಳಸಿ­­­ದ್ದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಬಿಜೆಪಿ ವಕ್ತಾರ ಷಹನವಾಜ್‌ ಹುಸೇನ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ದಲಿತರನ್ನು ತಮ್ಮ ಮನೆಗೆ ಏಕೆ ಆಹ್ವಾನಿಸುವುದಿಲ್ಲ ಎಂದು ವಾಯವ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಉದಿತ್‌ ರಾಜ್‌ ಪ್ರಶ್ನಿಸಿದ್ದಾರೆ.

ಪ್ರತಿಕೃತಿ ದಹಿಸಿ ಪ್ರತಿಭಟನೆ: ರಾಮ್‌ದೇವ್‌ ಹೇಳಿಕೆ ಖಂಡಿಸಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕಾರ್ಯಕರ್ತರು ಮತ್ತು  ದಲಿತ ಸಂಘಟನೆಗಳ ಸದಸ್ಯರು ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ.

ಪಂಜಾಬ್‌ನ ಫಗ್ವಾಡಾದಲ್ಲಿ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು, ರಾಮ್‌ದೇವ್‌ ಪ್ರತಿಕೃತಿ ದಹಿಸಿದರು.

ಹಿಂಪಡೆಯಲು ಸಿದ್ಧ: ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ, ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್‌ದೇವ್‌ ಅವರು, ದಲಿತರಿಗೆ ನೋವು ತರುವಂತಿದ್ದರೆ ಹೇಳಿಕೆ ಹಿಂಪಡೆಯಲು ಸಿದ್ಧ ಎಂದಿದ್ದಾರೆ.

ಪ್ರಕರಣ:
ರಾಮ್‌ದೇವ್‌ ವಿರುದ್ಧ ಲಖ­ನೌನ ಮಹಾನಗರ ಪೊಲೀಸ್‌ ಠಾಣೆ­ಯಲ್ಲಿ ಭಾರತೀಯ ದಂಡ ಸಂಹಿ­ತೆಯ (ಐಪಿಸಿ) 171(ಜಿ) ಕಲಂ (ಚುನಾವಣಾ ಸಂಬಂಧ ಸುಳ್ಳು ಹೇಳಿಕೆ) ಅನ್ವಯ ಎಫ್‌ಐಆರ್‌ ದಾಖಲಾಗಿದೆ.

‘ರಾಮ್‌­ದೇವ್‌ ಅವರ ವಿವಾ­ದಾ­ತ್ಮಕ ಹೇಳಿಕೆಯ ವಿಡಿಯೊ ದೃಶ್ಯ­ಗಳನ್ನು ವೀಕ್ಷಿಸಿ, ವಿಶ್ಲೇಷಿಸಿದ ನಂತರವೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ  ಎಂದು ಹೆಚ್ಚು­ವರಿ ಪೊಲೀಸ್‌ ವರಿಷ್ಠಾ­ಧಿ­ಕಾರಿ ಹಬೀಬುಲ್‌ ಹಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.