ADVERTISEMENT

ಬಿ.ಆರ್‌. ಶೆಟ್ಟಿ ತೆಕ್ಕೆಗೆ ‘ಟ್ರಾವೆಲ್‌ಎಕ್ಸ್‌’

ರೂ 9,850 ಕೋಟಿಗೆ ಲಂಡನ್‌ ಮೂಲದ ಖರೀದಿ

​ಪ್ರಜಾವಾಣಿ ವಾರ್ತೆ
Published 24 ಮೇ 2014, 19:30 IST
Last Updated 24 ಮೇ 2014, 19:30 IST

ನವದೆಹಲಿ (ಪಿಟಿಐ): ದುಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ  ಅನಿವಾಸಿ ಉದ್ಯಮಿ ಬಿ.ಆರ್‌.ಶೆಟ್ಟಿ  (72) ಅವರು ಲಂಡನ್‌ ಮೂಲದ 
‘ಟ್ರಾವೆ­ಲ್‌ಎಕ್ಸ್‌ ಹೋಲ್ಡಿಂಗ್ಸ್‌’  ಕಂಪೆನಿ­ಯನ್ನು 100 ಕೋಟಿ ಪೌಂಡ್‌ಗಳಿಗೆ (ಅಂದಾಜು ರೂ9,850 ಕೋಟಿಗೆ) ಖರೀದಿಸಿದ್ದಾರೆ.

ವಿದೇಶಿ ವಿನಿಮಯ ವಹಿವಾಟಿನಲ್ಲಿ ಪ್ರಪಂ­ಚದಲ್ಲೇ ಮುಂಚೂ­ಣಿಯಲ್ಲಿ­ರುವ ರಿಟೇಲ್‌ ಕಂಪೆನಿ ‘ಟ್ರಾವೆಲ್­ಎಕ್ಸ್‌’,  27 ದೇಶಗಳಲ್ಲಿ ವಹಿ­ವಾಟು ಹೊಂ­ದಿದ್ದು, 1,500 ಮಳಿಗೆಗಳು ಮತ್ತು 1,300 ‘ಎಟಿಎಂ’ಗಳನ್ನು ಒಳಗೊಂಡಿದೆ.

ಅಪೆಕ್ಸ್‌ ಪಾರ್ಟ್‌ನರ್ಸ್‌ ಮತ್ತು ಲಾಯ್ಡ್‌ ಡಾರ್ಫ್‌ಮನ್‌  ಒಡೆತನದ  ‘ಟ್ರಾವೆಲ್‌­ಎಕ್ಸ್‌’  ಕಂಪೆನಿಯನ್ನು  ಬಿ.ಆರ್‌.ಶೆಟ್ಟಿ  ಖರೀದಿ­ಸಿದ್ದಾರೆ. ಆದರೆ, ಉಭಯ ಕಂಪೆನಿಗಳು ಖರೀದಿ ಮೊತ್ತ ಬಹಿರಂಗ­ಪಡಿಸಿಲ್ಲ. ಅಂದಾಜು ರೂ9,500 ರಿಂದ ರೂ10 ಸಾವಿರ ಕೋಟಿಗೆ ಈ ಖರೀದಿ ಒಪ್ಪಂದ ನಡೆದಿರುವ ಸಾಧ್ಯತೆ ಇದೆ ಎಂದು ಹೂಡಿಕೆ ಸಂಸ್ಥೆ ಯೊಂದರ ಮೂಲಗಳು ಹೇಳಿವೆ.

ಖರೀದಿ ಪ್ರಕ್ರಿಯೆ ಪೂರ್ಣಗೊಂಡ ನಂತರ ‘ಟ್ರಾವೆಲ್‌ಎಕ್ಸ್‌’ನ ಸಂಸ್ಥಾಪಕ   ಮತ್ತು ಅಧ್ಯಕ್ಷರಾಗಿರುವ ಲಾಯ್ಡ್‌ ಡಾರ್ಫ್‌ಮನ್‌ ಹೂಡಿಕೆದಾರರಾಗಿ ಮುಂದುವರಿಯಲಿದ್ದಾರೆ. ‘ಸಿಇಒ’ ಪೀಟರ್‌ ಜಾಕ್ಸನ್‌ ಹೊಸ ಆಡಳಿತ ಮಂಡಳಿಯನ್ನು ಸೇರಲಿದ್ದು, ಕಂಪೆನಿ­ಯನ್ನು ಮುನ್ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

‘ಅಬುದಾಬಿ ಪಾಲಿಗೆ ಇದೊಂದು ಮಹತ್ವದ ಖರೀದಿ. ‘ಟ್ರಾವೆಲ್‌ಎಕ್ಸ್‌’ನ ಲಾಯ್ಡ್‌ ಡಾರ್ಫ್‌ಮನ್‌ ಮತ್ತು ಪೀಟರ್‌ ಜತೆ ಕೆಲಸ ಮಾಡು­ವುದನ್ನು ಎದುರು ­ನೋಡುತ್ತಿದ್ದೇನೆ’ ಎಂದು ಶೆಟ್ಟಿ ಹೇಳಿದ್ದಾರೆ.

ಈ ಒಪ್ಪಂದವು ‘ಟ್ರಾವೆಲ್‌­ಎಕ್ಸ್‌’ನ ಮಾರುಕಟ್ಟೆ ವಿಸ್ತರಣೆಗೆದೃಷ್ಟಿಯಿಂದ ಮಹತ್ವದ್ದು’ ಎಂದು ‘ಸಿಇಒ’ ಪೀಟರ್‌ ಜಾಕ್ಸನ್‌ ಅಭಿಪ್ರಾಯ­ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.