ADVERTISEMENT

ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಎಎಪಿ

ಸಿದ್ದಯ್ಯ ಹಿರೇಮಠ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಎಎಪಿ
ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಎಎಪಿ   

ನವದೆಹಲಿ: ಇಲ್ಲಿನ ಮೂರು ಮಹಾನಗರ ಪಾಲಿಕೆಗಳ 272 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದ್ದು, ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ (ಎಎಪಿ)ದಿಂದ ತೀವ್ರ ಸ್ಪರ್ಧೆ ಎದುರಾಗಿದೆ.

ಐದು ವರ್ಷಗಳ ಹಿಂದೆ ದೆಹಲಿ ಮಹಾನಗರ ಪಾಲಿಕೆಯನ್ನು ವಿಂಗಡಿಸಿ ಮೂರು ಪಾಲಿಕೆಗಳನ್ನಾಗಿ ರಚಿಸಿದ ನಂತರ ನಡೆದಿದ್ದ ಚುನಾವಣೆಯಲ್ಲಿ, ಮೂರೂ ಸಂಸ್ಥೆಗಳ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ, ಇತ್ತೀಚಿನ ಉತ್ತರಾಖಂಡ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಗೆಲುವು ಪುಷ್ಟಿ ನೀಡಿದೆ.
ದೆಹಲಿಯಲ್ಲಿ ಸರ್ಕಾರ ನಡೆಸುತ್ತಿರುವ ಎಎಪಿ, ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಜಯಿಸುವ ಮೂಲಕ ಆತ್ಮವಿಶ್ವಾಸದ ಅಲೆಯ ಮೇಲೆ ತೇಲುತ್ತಿದ್ದು, ಪಾಲಿಕೆಯ ಆಡಳಿತವನ್ನೂ ತನ್ನ ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದೆ.

ಒಂದು ದಶಕದಿಂದ ದೆಹಲಿ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ದೆಹಲಿಯಲ್ಲಿರುವ ಸಾರ್ವಜನಿಕ ಉದ್ಯಾನಗಳು, ಶಾಲೆಗಳು, ಆಸ್ಪತ್ರೆಗಳ ಅಭಿವೃದ್ಧಿಯ ಮಂತ್ರವನ್ನು ಪಠಿಸುತ್ತ, ಮೋದಿ ಅವರ ಸಾಧನೆಯ ಜಪ ಮಾಡುತ್ತ ಮತ ಯಾಚಿಸಿದ್ದರೆ, ಕೇಜ್ರಿವಾಲ್‌ ಬಣ ಮಾತ್ರ ಸ್ವಚ್ಛ ಆಡಳಿತದ ಆಶ್ವಾಸನೆಯೊಂದಿಗೆ ಮತ ಯಾಚಿಸಿದೆ.

ADVERTISEMENT

ಕಳೆದ ವರ್ಷ ದೆಹಲಿಯಾದ್ಯಂತ ಹರಡಿದ್ದ ಡೆಂಗಿ ಮತ್ತು ಮಲೇರಿಯಾದಿಂದಾಗಿ ಸಾರ್ವಜನಿಕರು ಎದುರಿಸಿದ ಸಂಕಷ್ಟವನ್ನೇ ಚುನಾವಣಾ ವಿಷಯವ
ನ್ನಾಗಿ ಬಳಸಿಕೊಂಡಿರುವ ಎಎಪಿ ಶಾಲೆ, ಆಸ್ಪತ್ರೆ ಮತ್ತು ಉದ್ಯಾನಗಳ ಸ್ಥಿತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವು
ದಾಗಿ ಹೇಳಿದೆ.
 ಎಎಪಿ ನಿಂದ ಬೇರ್ಪಟ್ಟಿರುವ ಪ್ರಶಾಂತ್‌ ಭೂಷಣ್‌ ಹಾಗೂ ಯೋಗೇಂದ್ರ ಯಾದವ್‌ ಸ್ಥಾಪಿಸಿರುವ ಸ್ವರಾಜ್‌ ಇಂಡಿಯಾ ಎಲ್ಲ 272 ಕ್ಷೇತ್ರ
ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಸದ್ದು ಮಾಡದ ಕಾಂಗ್ರೆಸ್‌!
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯನ್ನು ಬೇರ್ಪಡಿಸಿ ಉತ್ತರ ದೆಹಲಿ (ಒಟ್ಟು 104 ಸ್ಥಾನ), ದಕ್ಷಿಣ ದೆಹಲಿ (104 ಸ್ಥಾನ) ಹಾಗೂ ಪೂರ್ವ ದೆಹಲಿ (64 ಸ್ಥಾನ) ಪಾಲಿಕೆಗಳನ್ನು ರಚಿಸಲಾಗಿದೆ.

2012ರಲ್ಲಿ ನಡೆದ ಚುನಾವಣೆಯಲ್ಲಿ ಕ್ರಮವಾಗಿ 59, 44 ಮತ್ತು 39 ಸ್ಥಾನಗಳಿಸಿದ್ದ ಬಿಜೆಪಿ, ದಕ್ಷಿಣ ದೆಹಲಿ ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದು ಆಡಳಿತ ನಡೆಸಿದೆ.

ಕಳೆದ ಬಾರಿ ಕ್ರಮವಾಗಿ 29, 29 ಹಾಗೂ 19 ಸ್ಥಾನಗಳಿಸಿದ್ದ ಕಾಂಗ್ರೆಸ್‌ ಈ ಬಾರಿಯೂ ಎಲ್ಲ ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ಕಣಕ್ಕಿಳಿಸಿದ್ದರೂ ಸ್ಪರ್ಧೆಯ ವಿಷಯದಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ.

ಅಂಕಿ ಅಂಶ

1.32- ಕೋಟಿ ಮತದಾರರ ಸಂಖ್ಯೆ

13,000 -ಮತಗಟ್ಟೆಗಳ ಸಂಖ್ಯೆ

1.10ಲಕ್ಷ -ಮೊದಲ ಬಾರಿಯ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.