ADVERTISEMENT

ಬಿಜೆಪಿ ನಾಯಕನ ಕೊಲೆ: ಅಂತರರಾಷ್ಟ್ರೀಯ ಕಬಡ್ಡಿಯ ಮಾಜಿ ಆಟಗಾರ ಬಂಧನ

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 9:11 IST
Last Updated 22 ಸೆಪ್ಟೆಂಬರ್ 2017, 9:11 IST
ಬಿಜೆಪಿ ನಾಯಕನ ಕೊಲೆ: ಅಂತರರಾಷ್ಟ್ರೀಯ ಕಬಡ್ಡಿಯ ಮಾಜಿ ಆಟಗಾರ ಬಂಧನ
ಬಿಜೆಪಿ ನಾಯಕನ ಕೊಲೆ: ಅಂತರರಾಷ್ಟ್ರೀಯ ಕಬಡ್ಡಿಯ ಮಾಜಿ ಆಟಗಾರ ಬಂಧನ   

ನವದೆಹಲಿ: ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ನಡೆದ ಬಿಜೆಪಿ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ರಾಜು ಕುಮಾರ್‌ ಅಲಿಯಾಸ್‌ ರಾಜು ಪೆಹಲ್ವಾನ್‌(33) ಎಂಬಾತನನ್ನು ಬಂಧಿಸಲಾಗಿದೆ.

ಸೆಪ್ಟೆಂಬರ್‌ 2 ರಂದು ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗಜೇಂಧ್ರ ಭಟಿ ಹಾಗೂ ಅವರ ಸಹಾಯಕ ಬಲ್ಬಿರ್‌ ಸಿಂಗ್‌ ಚೌಹಾಣ್‌ರತ್ತ ಗುಂಡು ಹಾರಿಸಿದ್ದರು.  ನಗರದ ಖೋಬಾ ಕಾಲೋನಿಯಲ್ಲಿ ನಡೆದ ಈ ಘಟನೆಯಲ್ಲಿ ಗಜೇಂಧ್ರ ಭಟಿ ಮೃತಪಟ್ಟು, ಚೌಹಾಣ್‌ ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ನರೇಂದರ್‌ ಅಲಿಯಾಸ್‌ ಫೌಜಿ ಎಂಬಾತನನ್ನು ಸೆ.11ರಂದು ಬಂಧಿಸಿದ್ದರು. ಈತ ವಿಚಾರಣೆ ವೇಳೆ ರಾಜು ಪೆಹಲ್ವಾನ್‌ ಕೂಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಿಕೆ ನೀಡಿದ್ದ.

ADVERTISEMENT

‘ವಿಚಾರಣೆ ಮುಂದುವರಿದಂತೆ ಶಾಹಿಬಾಬಾದ್‌ನ ಮಾಜಿ ಶಾಸಕ ಅಮರ್ಪಾಲ್‌ ಶರ್ಮಾ ಕೊಲೆಗೆ ಸುಫಾರಿ ನೀಡಿದ್ದರು ಎಂಬುದು ತಿಳಿದುಬಂದಿದೆ’ ಎಂದು ‍ಪೊಲೀಸ್‌ ಉಪ ಆಯುಕ್ತ ಸಂಜೀವ್‌ ಕುಮಾರ್‌ ಯಾದವ್‌ ತಿಳಿಸಿದ್ದಾರೆ. ಕೊಲೆ ಮಾಡಲು ₹ 10ಲಕ್ಷಕ್ಕೆ ಸುಫಾರಿ ನೀಡಿದ್ದ ಅಮರ್ಪಾಲ್‌ ಇದಕ್ಕಾಗಿ ಮುಂಗಡವಾಗಿ ₹50 ಸಾವಿರ ಹಣ ನೀಡಿದ್ದ.

‘ಫೌಜಿ ಬಂಧನದ ನಂತರ ಇತರ ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಸದ್ಯ ಉತ್ತರಪ್ರದೇಶ ನ್ಯಾಯಾಲಯ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಕಾಟ ಮುಂದುವರಿಸಿದ್ದ ಪೊಲೀಸರಿಗೆ ಗುರುವಾರ ಸಿರಾಜ್‌ಪುರ ಬಳಿಯ ಗುರುದ್ವಾರ ಸಮೀಪದ ಜಿಟಿ ರಸ್ತೆಯಲ್ಲಿ ರಾಜು ಕುಮಾರ್‌ ಸಿಕ್ಕಿಬಿದ್ದಿದ್ದಾನೆ.

2005–09 ಅವಧಿಯಲ್ಲಿ ಉತ್ತರಪ್ರದೇಶ ತಂಡದ ಪರ ಆಡಿದ್ದ ರಾಜು, ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತ ತಂಡವನ್ನೂ ಪ್ರತಿನಿಧಿಸಿದ್ದ. 2009ರಲ್ಲಿ ಮದುವೆಯಾದ ನಂತರ ಕಬಡ್ಡಿಯನ್ನು ಬಿಟ್ಟು ಬ್ಯುಸಿನೆಸ್‌ನತ್ತ ಮುಖಮಾಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.