ADVERTISEMENT

ಬಿಯಾಸ್ ದುರಂತ: 5 ವಿದ್ಯಾರ್ಥಿಗಳ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 10:33 IST
Last Updated 9 ಜೂನ್ 2014, 10:33 IST

ಮಂಡಿ (ಹಿಮಾಚಲ ಪ್ರದೇಶ) (ಪಿಟಿಐ): ಮನಾಲಿ-ಕಿರತ್‌ಪುರ ಹೆದ್ದಾರಿಯಲ್ಲಿ ಥಾಲೊಟ್‌ ಸಮೀಪ ಬಿಯಾಸ್‌ ನದಿಯಲ್ಲಿ ಭಾನುವಾರ ಸಂಜೆ ಕೊಚ್ಚಿ ಹೋಗಿದ್ದ ಹೈದರಾಬಾದ್‌ನ 24 ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪೈಕಿ ಐವರ ಶವಗಳು ಸೋಮವಾರ ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವೀರಭದ್ರ ಸಿಂಗ್‍ ಅವರು ತನಿಖೆಗೆ ಆದೇಶಿಸಿದ್ದು, ಲಾರ್ಜಿ ಜಲವಿದ್ಯುತ್ ಯೋಜನೆಯ ಸ್ಥಾನಿಕ ಎಂಜಿನಿಯರ್‍ ನನ್ನು ಅಮಾನತುಗೊಳಿಸಲಾಗಿದೆ.

ಇವರೆಗೆ ಮೂವರು ವಿದ್ಯಾರ್ಥಿಗಳ ಹಾಗೂ ಇಬ್ಬರು ವಿದ್ಯಾರ್ಥಿನಿಯರ ಶವಗಳನ್ನು ರಕ್ಷಣಾ ಕಾರ್ಯಾಚರಣೆ ಪಡೆಯು ಪತ್ತೆಮಾಡಿದ್ದು, ಇನ್ನೂ 19 ವಿದ್ಯಾರ್ಥಿಗಳ ಶವಗಳು ಪತ್ತೆಯಾಗಬೇಕಿದೆ. ಘಟನೆ ಕುರಿತಂತೆ ಮಾಹಿತಿ ನೀಡುವಂತೆ ಕೇಂದ್ರ ಗೃಹ ಸಚಿವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ADVERTISEMENT

ಘಟನೆ ಹಿನ್ನೆಲೆ:

ಹೈದರಾಬಾದ್‌ನ ವಿಎನ್‌ಆರ್‌ ವಿಜ್ಞಾನ ಜ್ಯೋತಿ ಇನ್ಸ್‌ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ 24 ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಭಾನುವಾರ ಹಿಮಾಚಲ ಪ್ರದೇಶ ಪ್ರವಾಸಕ್ಕಾಗಿ ಬಂದಿದ್ದರು.

ಕೆಲವು ವಿದ್ಯಾರ್ಥಿನಿಯರು ಸೇರಿದಂತೆ ವಿದ್ಯಾರ್ಥಿಗಳು ನದಿ ದಂಡೆಯಲ್ಲಿ ನಿಂತು ಫೋಟೊ ತೆಗೆಯುತ್ತಿದ್ದರು. ಅದೇ ವೇಳೆ ಲಾರ್ಜಿ ಜಲವಿದ್ಯುತ್‌ ಯೋಜನೆಯ ಜಲಾ­ಶ­ಯ­­ದಿಂದ ಯಾವುದೇ ಮುನ್ನೆಚ್ಚರಿಕೆ ನೀಡದೆ ನದಿಗೆ ನೀರು ಬಿಡಲಾಗಿತ್ತು. ಹಠಾತ್ತಾಗಿ ಒಮ್ಮೆಲೆ ನುಗ್ಗಿ ಬಂದ ನೀರಿನಲ್ಲಿ ದಡದಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಕೊಚ್ಚಿ ಹೋದರು.  ಅಧಿಕೃತ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ 18 ವಿದ್ಯಾರ್ಥಿಗಳು ಮತ್ತು ಆರು ವಿದ್ಯಾರ್ಥಿನಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಕ್ಷಣವೇ ತೀವ್ರ ಪ್ರಮಾಣದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.