ADVERTISEMENT

ಬಿರುಸಿನ ಮತದಾನ

ಮತಯಂತ್ರ ಸೇರಿದ ಸೋನಿಯಾ, ಮೋದಿ, ಅಡ್ವಾಣಿ, ಭವಿಷ್ಯ

​ಪ್ರಜಾವಾಣಿ ವಾರ್ತೆ
Published 1 ಮೇ 2014, 10:29 IST
Last Updated 1 ಮೇ 2014, 10:29 IST

ನವದೆಹಲಿ (ಪಿಟಿಐ): ದೇಶದ ಏಳು ರಾಜ್ಯಗಳು ಮತ್ತು ಎರಡು ಕೇಂದ್ರಾ­ಡಳಿತ ಪ್ರದೇಶಗಳಲ್ಲಿನ 89 ಕ್ಷೇತ್ರಗಳಿಗೆ ಬುಧವಾರ ನಡೆದ 7ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಕಡೆ ಬಿರುಸಿನ ಮತದಾನ ನಡೆಯಿತು. ಇದರೊಂದಿಗೆ ಹಿಂದಿನ ಆರು ಹಂತಗಳಲ್ಲಿ ಕಂಡುಬಂದಿದ್ದ ‘ಉತ್ಸಾಹದ ಮತದಾನ’ ಮುಂದುವ­ರಿಯಿತು.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಆ ಪಕ್ಷದ ಹಲವು ಪ್ರಮುಖರು, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಲ್‌.ಕೆ.­ಅಡ್ವಾಣಿ, ರಾಜನಾಥ್‌ ಸಿಂಗ್‌, ಮುರಳಿ ಮನೋಹರ ಜೋಷಿ, ಅರುಣ್‌ ಜೇಟ್ಲಿ ಮತ್ತಿತರರ ಭವಿಷ್ಯ ಈಗ ಮತಯಂತ್ರದಲ್ಲಿ ಅಡಗಿದೆ.

ಪಶ್ಚಿಮ ಬಂಗಾಳದಲ್ಲಿ (9 ಕ್ಷೇತ್ರ) ಸಂಜೆ 6ರ ಹೊತ್ತಿಗೆ ಅತ್ಯಧಿಕ ಅಂದರೆ ಶೇ 82ರಷ್ಟು ಮತ ಚಲಾವಣೆ ಆಯಿತು. ಮತಗಟ್ಟೆಗಳ ಮುಂದೆ ಇನ್ನೂ ಉದ್ದನೆಯ ಸರದಿ ಇದ್ದರಿಂದ ಈ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ.

ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಬಿಸಿಲ ಧಗೆಯ ನಡು­ವೆಯೂ ಶೇ 73ರಷ್ಟು ಮತದಾರರು ಮುದ್ರೆ ಒತ್ತಿದರು. ಕೆಲ ಅಹಿತಕರ ಘಟನೆಗಳನ್ನು ಬಿಟ್ಟರೆ ಬಹುತೇಕ ಕಡೆ ಶಾಂತಿಯುತ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಈ ಹಿಂದೆ 1967ರಲ್ಲಿ ಶೇ 71.13ರಷ್ಟು ಮತ ಚಲಾವಣೆ­ಯಾಗಿದ್ದು ಇದುವರೆಗಿನ ಗರಿಷ್ಠ ಪ್ರಮಾಣವಾಗಿತ್ತು.

ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ  ಶೇ 62­ರಷ್ಟು ಮತ ಚಲಾವಣೆ ದಾಖಲಾ­ಯಿತು. ಈ ರಾಜ್ಯದಲ್ಲಿನ ಕಳೆದ ಚುನಾ­ವಣೆಯಲ್ಲಿ ಆಗಿದ್ದ ಶೇ 47.92ರಷ್ಟು ಮತ ಚಲಾವಣೆಗೆ ಹೋಲಿಸಿದರೆ ಈ ಬಾರಿ ಇಲ್ಲಿ ಮತ ಚಲಾವಣೆ ಪ್ರಮಾ­ಣದಲ್ಲಿ ಗಣನೀಯ ಹೆಚ್ಚಳವಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸ್ಪರ್ಧಿಸಿದ್ದ ವಡೋ­ದರಾ ಕ್ಷೇತ್ರದಲ್ಲಿ ಶೇ 70ರಷ್ಟು ಮತದಾರರು ಹಕ್ಕು ಚಲಾಯಿಸಿದರು.

ಉತ್ತರ ಪ್ರದೇಶದಲ್ಲಿ ಶೇ 57.10 ಮತದಾನವಾದರೆ, ಬಿಹಾರದ 7 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 60ರಷ್ಟು ಮತದಾನವಾಯಿತು. ಬಿಹಾರ­­ದಲ್ಲಿ ಹಲವು ಗ್ರಾಮಗಳು ವಿದ್ಯುತ್‌ ಕೊರತೆ ಹಾಗೂ ಮೂಲ ಸೌಕರ್ಯ ಇಲ್ಲದಿರುವುದನ್ನು ಖಂಡಿಸಿ ಚುನಾವಣೆ ಬಹಿಷ್ಕರಿಸಿದ್ದವು.
ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಸ್ಪರ್ಧಿಸಿದ್ದ  ಶ್ರೀನಗರ ಕ್ಷೇತ್ರದಲ್ಲಿ ಶೇ25.62ರಷ್ಟು ಮತದಾನ ವಾಯಿತು.

2,500 ಕಾಶ್ಮೀರಿ ವಲಸಿಗರು ಕೂಡ ಜಮ್ಮು, ಉಧಂಪುರ ಮತ್ತು ದೆಹಲಿ­ಗಳಲ್ಲಿ ಸ್ಥಾಪಿಸಿದ್ದ ವಿಶೇಷ ಮತಗ­ಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.
1989ರಲ್ಲಿ ಕಾಶ್ಮೀರದಲ್ಲಿ ಉಗ್ರ­ವಾದ ತಲೆಎತ್ತಿದಾಗಿನಿಂದ ಮತದಾ­ನದ ಪ್ರಮಾಣ ಕಡಿಮೆಯೇ ಇದೆ. ಕಳೆದ ಬಾರಿ ಕಣಿವೆಯಲ್ಲಿ ಶೇ 25.­55ರಷ್ಟು ಮತದಾನವಾಗಿದ್ದರೆ, 2004­ರಲ್ಲಿ ಕೇವಲ ಶೇ 18ರಷ್ಟು ಮತ ಚಲಾವಣೆಯಾಗಿತ್ತು.

ತೆಲಂಗಾಣದಲ್ಲಿ: ಆಂಧ್ರಪ್ರದೇಶದ ತೆಲಂ­ಗಾಣ ಭಾಗ­ದಲ್ಲಿ 17 ಲೋಕ­ಸಭಾ ಚುನಾವಣೆಯ ಜತೆಗೇ ಮೊತ್ತ­ಮೊದಲ ರಾಜ್ಯ ಸರ್ಕಾರದ ಆಯ್ಕೆಗೂ ಚುನಾವಣೆ ನಡೆದಿದ್ದು ಶೇ 72ರಷ್ಟು ಮತ  ಚಲಾವಣೆಯಾಗಿದೆ. ಕೇಂದ್ರಾ­ಡಳಿತ ಪ್ರದೇಶವಾದ ದಾದರ್‌ ಮತ್ತು ನಗರಹವೇಲಿಯಲ್ಲಿ ಶೇ 85 ಮತ್ತು ಶೇ 76ರಷ್ಟು ದಾಖಲೆ  ಮತದಾನ ದಾಖ­ಲಾ­ಗಿದೆ. ದಮನ್‍ ಮತ್ತು ದಿಯುನಲ್ಲಿ ಶೇ 80ರಷ್ಟು ಮತದಾನವಾಗಿದೆ.

13.83 ಕೋಟಿ ಮತದಾರರಿದ್ದ ಏಳನೇ ಹಂತದ ಚುನಾವಣೆ ಮುಗಿ­ಯು­ವುದರೊಂದಿಗೆ 543 ಲೋಕಸಭಾ ಕ್ಷೇತ್ರಗಳ ಪೈಕಿ 438 ಕ್ಷೇತ್ರಗಳಲ್ಲಿ ಮತ­ದಾನ ಮುಕ್ತಾಯವಾಗಿದೆ. ಉಳಿದ 105 ಕ್ಷೇತ್ರಗಳಿಗೆ ಎರಡು ಹಂತ­ಗ­ಳಲ್ಲಿ (ಮೇ 7ರಂದು 64 ಕ್ಷೇತ್ರ, ಮೇ 12ರಂದು 41 ಕ್ಷೇತ್ರ) ಮತದಾನ ನಡೆಯಲಿದೆ.

ಚಿರಂಜೀವಿಗೆ ಮುಜುಗರ
ಹೈದರಾಬಾದ್‌ (ಪಿಟಿಐ): ಇಲ್ಲಿನ ಮತಗಟ್ಟೆಯೊಂದರಲ್ಲಿ ಸರದಿ ಮುರಿದು ಬುಧವಾರ ಮತ ಹಾಕಲು ಯತ್ನಿಸಿದ ಕೇಂದ್ರ ಸಚಿವ ಹಾಗೂ ತಾರಾ ನಟ ಕೆ.ಚಿರಂಜೀವಿ ಅವರು ಯುವಕನೊಬ್ಬನ ಆಕ್ಷೇಪದಿಂದ ಮುಜು­ಗ­ರಕ್ಕೊಳಗಾದ ಘಟನೆ ನಡೆಯಿತು. ಈ ಆಕ್ಷೇಪದ ನಂತರ ಚಿರಂಜೀವಿ ಅವರು ಸರದಿಯಲ್ಲಿ ನಿಂತೇ ಮತ ಹಾಕಬೇಕಾ­ಯಿತು.

ಚಂದ್ರಬಾಬು ನಾಯ್ಡು ಮತ ಅಸಿಂಧು
ಹೈದರಾಬಾದ್‌: ಮತ ಚಲಾವಣೆ ಗೋಪ್ಯತಾ ನಿಯಮವನ್ನು ಉಲ್ಲಂಘಿಸಿ ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿ ಘೋಷಿಸಿದ ತೆಲುಗು ದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬುಧವಾರ ಚಲಾಯಿಸಿದ ಮತವನ್ನು  ಅಸಿಂಧು­ಗೊಳಿಸಿರುವುದಾಗಿ ಚುನಾವಣಾಧಿಕಾರಿ ಹೇಳಿದ್ದಾರೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.