ADVERTISEMENT

ಬಿಹಾರದಲ್ಲಿ ‘ಮಹಾಸ್ವಾರ್ಥಿ’ಗಳ ಕೂಟ: ಮೋದಿ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 10:47 IST
Last Updated 9 ಅಕ್ಟೋಬರ್ 2015, 10:47 IST

ಔರಂಗಾಬಾದ್‌ (ಪಿಟಿಐ/ ಐಎಎನ್‌ಎಸ್‌): ಬಿಹಾರ ಚುನಾವಣೆಗಾಗಿ ಕಾಂಗ್ರೆಸ್‌, ಜೆಡಿ–ಯು ಮತ್ತು ಆರ್‌ಜೆಡಿ ರಚಿಸಿಕೊಂಡಿರುವ ‘ಮಹಾಕೂಟ’ವನ್ನು ‘ಮಹಾಸ್ವಾರ್ಥಿಗಳ ಕೂಟ’ ಎಂದು ಕುಟುಕಿರುವ ಪ್ರಧಾನಿ ನರೇಂದ್ರ ಮೋದಿ, ಒಂದು ವೇಳೆ ಈ ಕೂಟ ಅಧಿಕಾರಕ್ಕೆ ಬಂದರೆ ಲಾಲೂ ಪ್ರಸಾದ್‌ ಯಾದವ್‌ ಇದರ ರಿಮೋಟ್‌ ಕಂಟ್ರೋಲ್‌ ಆಗಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರ ಚುನಾವಣೆಗಾಗಿ ಜೆಡಿಯು, ಆರ್‌ಜೆಡಿ ಜತೆಗೆ ಕಾಂಗ್ರೆಸ್‌ ಕೈಜೋಡಿಸಿದೆ.  ಬಿಹಾರವನ್ನು 60 ವರ್ಷ ಆಳಿದ ಇವರು ಒಂದೇ ಒಂದು ಉದ್ಯೋಗಾವಕಾಶ ಸೃಷ್ಟಿಸಿಲ್ಲ. ಬಿಹಾರಕ್ಕಾಗಿ ಏನೂ ಮಾಡಲು ಸಾಧ್ಯವಾಗದ ಇವರು ಈಗ ನನ್ನನ್ನು ಬೈಯುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಅವರು ಶುಕ್ರವಾರ ಸಸಾರಾಂ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.  

‘ಲಾಲೂ, ನಿತೀಶ್‌ ಮತ್ತು ಸೋನಿಯಾಗಾಂಧಿ ಪ್ರತಿ ದಿನ ಬೆಳಿಗ್ಗೆ ಎದ್ದು   ನಿಘಂಟು ತೆಗೆದು ನನ್ನನ್ನು ಬೈಯಲು ಕೆಟ್ಟ ಕೆಟ್ಟ ಪದಗಳನ್ನು ಹುಡುಕುತ್ತಿದ್ದಾರೆ. ಈಗ ನಿಘಂಟುವಿನಲ್ಲಿರುವ ಪದಗಳೆಲ್ಲಾ ಮುಗಿದು ಹೋಗಿದ್ದು, ಬೈಗುಳಕ್ಕಾಗಿ ಹೊಸ ಫ್ಯಾಕ್ಟರಿಯನ್ನೇ ಪ್ರಾರಂಭಿಸಲಾಗಿದೆ ಎಂದು ವ್ಯಂಗ್ಯವಾಡಿದರು. 
 
ಲಾಲೂ ಆಡಳಿತವನ್ನು ‘ಜಂಗಲ್‌ ರಾಜ್‌’ಎಂದು ಕರೆದಿದ್ದ ನಿತೀಶ್‌ ಅವರು ಈಗ ಸುಮ್ಮನಿದ್ದಾರೆ. ಮಾಂಝಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ನಿತೀಶ್‌ ಅವರು ದಲಿತರ ಬೆನ್ನಿಗೆ ಚೂರಿ ಹಾಕಿದರು ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT