ADVERTISEMENT

ಬಿಹಾರದ ಶಾಸಕರಲ್ಲಿ ಯಾದವರು ಶೇ 25ರಷುı!

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2015, 19:30 IST
Last Updated 11 ನವೆಂಬರ್ 2015, 19:30 IST

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾದವ ಸಮುದಾಯದ ಶಾಸಕರ ಸಂಖ್ಯೆಯೇ ಹೆಚ್ಚು. ಪ್ರತಿ ನಾಲ್ವರು ಶಾಸಕರಲ್ಲಿ ಒಬ್ಬರು ಯಾದವರು. ಜೆಡಿಯು– ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರೂ ಇದೇ ಸಮುದಾಯಕ್ಕೆ  ಸೇರಿದವರು.

243 ಸದಸ್ಯ ಬಲದ ಶಾಸನಸಭೆಯಲ್ಲಿ ಯಾದವ ಶಾಸಕರ ಸಂಖ್ಯೆ 61. ಇವರಲ್ಲಿ 42 ಮಂದಿ ಆರ್‌ಜೆಡಿ, 11 ಜೆಡಿಯು, ಇಬ್ಬರು ಕಾಂಗ್ರೆಸ್‌, ಆರು ಮಂದಿ ಬಿಜೆಪಿ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದಾರೆ. 

ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿಯ 38 ಶಾಸಕರಿದ್ದಾರೆ. ಇವರಲ್ಲಿ ಆರ್‌ಜೆಡಿಯ 13, ಜೆಡಿಯು 10, ಕಾಂಗ್ರೆಸ್‌ನ 5, ಎನ್‌ಡಿಎ ಮಿತ್ರ ಪಕ್ಷಗಳ 9 ಮತ್ತು ಸಿಪಿಐ (ಎಂಎಲ್‌– ಲಿಬರೇಷನ್‌)ನ ಒಬ್ಬರಿದ್ದಾರೆ.

24 ಮುಸ್ಲಿಂ ಶಾಸಕರಲ್ಲಿ 12 ಮಂದಿ ಆರ್‌ಜೆಡಿಗೆ, ತಲಾ ಐವರು ಜೆಡಿಯು ಹಾಗೂ ಕಾಂಗ್ರೆಸ್‌ಗೆ, ಒಬ್ಬರು ಸಿಪಿಐ (ಎಂಎಲ್‌– ಲಿಬರೇಷನ್‌)ಗೆ ಸೇರಿದವರು.

ಎನ್‌ಡಿಎ ಕಣಕ್ಕಿಳಿಸಿದ್ದ ಹತ್ತು ಮುಸ್ಲಿಂ ಅಭ್ಯರ್ಥಿಗಳಲ್ಲಿ ಒಬ್ಬರೂ ಗೆದ್ದಿಲ್ಲ. ಬಿಜೆಪಿ ಇಬ್ಬರಿಗೆ, ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರ ಹಿಂದುಸ್ತಾನ್‌ ಅವಾಮಿ ಮೋರ್ಚಾ ನಾಲ್ವರಿಗೆ, ರಾಂವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿ ಮೂವರಿಗೆ ಹಾಗೂ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿ ಒಬ್ಬರಿಗೆ ಟಿಕೆಟ್‌ ನೀಡಿದ್ದವು.

19 ರಜಪೂತರು, 19 ಕೊಯ್ರಿಗಳು, 17 ಭೂಮಿಹಾರರು, 16 ಕುರ್ಮಿಗಳು, 16 ವೈಶ್ಯರು, 10 ಬ್ರಾಹ್ಮಣ, ಮೂವರು ಕಾಯಸ್ಥ ಸಮಾಜಕ್ಕೆ ಸೇರಿದ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

19 ರಜಪೂತ ಶಾಸಕರಲ್ಲಿ ಬಿಜೆಪಿ 8, ಜೆಡಿಯು 6, ಕಾಂಗ್ರೆಸ್‌ 3 ಮತ್ತು ಆರ್‌ಜೆಡಿಯ ಇಬ್ಬರಿದ್ದಾರೆ. ಕೊಯ್ರಿಗಳಲ್ಲಿ ಜೆಡಿಯು 11, ಆರ್‌ಜೆಡಿ 4, ಬಿಜೆಪಿ 3 ಹಾಗೂ ಆರ್‌ಎಸ್‌ಎಲ್‌ಪಿಯ ಒಬ್ಬರು ಶಾಸಕರಿದ್ದಾರೆ.

ರಾಂವಿಲಾಸ್‌ ಪಾಸ್ವಾನ್‌ ಅವರು ತಮ್ಮ ಕುಟುಂಬದ ನಾಲ್ವರು ಸೇರಿದಂತೆ ಪರಿಶಿಷ್ಟ ಜಾತಿಯ 11 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರು. ಆದರೆ, ಅವರಲ್ಲಿ ಒಬ್ಬರೂ ಗೆದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.