ADVERTISEMENT

ಬೆಲೆ ಏರಿಕೆಗೆ ಪ್ರತಿಭಟನೆ ಮೊದಲ ದಿನವೇ ಕೋಲಾಹಲ

ಸಂಸತ್‌ ಬಜೆಟ್‌ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2014, 19:30 IST
Last Updated 7 ಜುಲೈ 2014, 19:30 IST

ನವದೆಹಲಿ (ಪಿಟಿಐ): ಸಂಸತ್‌ನ ಉಭಯ ಸದನಗಳಲ್ಲಿ ಬಜೆಟ್‌ ಅಧಿ­ವೇಶ­­­ನದ ಮೊದಲ ದಿನವಾದ ಸೋಮ­ವಾರ, ವಿರೋಧ ಪಕ್ಷಗಳು ಬೆಲೆ ಏರಿಕೆ ಹಾಗೂ ಹಣದುಬ್ಬರದ ವಿಚಾರ ಪ್ರಸ್ತಾ­ಪಿಸಿ ಭಾರಿ ಕೋಲಾಹಲ ಎಬ್ಬಿಸಿದವು.
ವಿರೋಧ ಪಕ್ಷದ ಸದಸ್ಯರು ಪ್ರತಿ­ಭ­ಟನೆ ನಡೆಸಿದ ಕಾರಣ ಲೋಕಸಭೆ ಕಲಾ­ಪ­ವನ್ನು ಮುಂದೂಡಲಾಯಿತು. ಇತ್ತ ರಾಜ್ಯ­ಸಭೆಯಲ್ಲಿ ಆಡಳಿತ ಪಕ್ಷದ ಸದ­ಸ್ಯರು, ‘ಈ ಹಿಂದಿನ ಯುಪಿಎ ಸರ್ಕಾರದ ದುರ್ಬಲ ನೀತಿಗಳೇ ಇಂದಿನ  ಈ ಸ್ಥಿತಿಗೆ ಕಾರಣ’ ಎಂದು ಮೂದಲಿಸಿದರು.

ಬೆಲೆ ಏರಿಕೆ ವಿಷಯವಾಗಿ ರಾಜ್ಯ­ಸಭೆ­ಯಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಹಣಕಾಸು ಸಚಿವ ಅರುಣ್‌್ ಜೇಟ್ಲಿ, ‘ಹಣದುಬ್ಬರ ಗಂಭೀರ ಹಾಗೂ ಸೂಕ್ಷ್ಮ ವಿಚಾರ. ಇದರ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಆಲೂಗಡ್ಡೆ ಹಾಗೂ ಈರುಳ್ಳಿ ಪೂರೈಕೆಗೆ ಕೊರತೆ ಆಗಿಲ್ಲ. ಧೃತಿಗೆಡುವ ಅಗತ್ಯವಿಲ್ಲ’ ಎಂದರು.

ಜೇಟ್ಲಿ ಉತ್ತರ ವಿರೋಧಪಕ್ಷದ ಸದ­ಸ್ಯ­ರಿಗೆ ಸಮಾಧಾನ ತರಲಿಲ್ಲ. ಕಾಂಗ್ರೆಸ್‌ ನೇತೃತ್ವದಲ್ಲಿ ಬಿಎಸ್‌ಪಿ, ತೃಣ­ಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಸಿಪಿಎಂ ಸದಸ್ಯರು ಸಭಾತ್ಯಾಗ ಮಾಡಿದರು.‘ಒಳ್ಳೆಯ ದಿನಗಳು ಬರುತ್ತವೆ’ ( ಅಚ್ಛೆ ದಿನ್‌ ಆಯೇಗಾ) ಎಂದು ಚುನಾ­ವಣೆ ಸಮಯದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮಾಡಿದ್ದ ಘೋಷಣೆಗಳನ್ನು ಲೇವಡಿ ಮಾಡಿದರು.

ಆಹಾರ ಪದಾರ್ಥಗಳು, ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರ ಮತ್ತು ತೈಲ ಬೆಲೆ ಏರಿಕೆಗಳು ಒಳ್ಳೆಯ ದಿನದ ಲಕ್ಷಣಗಳೇ ಎಂದು ವ್ಯಂಗ್ಯ­ವಾಡಿದರು. ಲೋಕಸಭೆ ಕೂಡ ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು. ಬೆಲೆ ಏರಿಕೆಗೆ ಸಂಬಂಧಿಸಿದ ನಿಲುವಳಿ ಸೂಚನೆ ಮೇಲೆ ಚರ್ಚೆ ನಡೆಸಿ ಮತಕ್ಕೆ ಹಾಕುವಂತೆ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ಪಟ್ಟು ಹಿಡಿದವು. ಆದರೆ ಸ್ಪೀಕರ್‌ ಮತಕ್ಕೆ ಅವಕಾಶವಿಲ್ಲದ ಚರ್ಚೆ ಪ್ರಸ್ತಾಪ ಮುಂದಿಟ್ಟರು. ಭಾರಿ ಗದ್ದಲದ ಕಾರಣ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು.

ಯುಪಿಎ ಸರ್ಕಾರ ಕಾರಣ: ರಾಜ್ಯಸಭೆಯಲ್ಲಿಯೂ ಬೆಲೆ ಏರಿಕೆ ಕುರಿತು ಕಾವೇರಿದ ಚರ್ಚೆ ನಡೆಯಿತು.  ಈಗಿನ ಪರಿಸ್ಥಿತಿಗೆ ಈ ಹಿಂದಿನ ಯುಪಿಎ ಸರ್ಕಾರವೇ ಕಾರಣ ಎಂದು ಸರ್ಕಾರ ಆರೋಪಿಸಿತು.   ‘41 ದಿನಗಳ ಎನ್‌ಡಿಎ ಸರ್ಕಾರ, ಬೆಲೆ ಏರಿಕೆ ನಿಯಂತ್ರಿಸಲು ತಕ್ಷಣದ ಕ್ರಮ ತೆಗೆದುಕೊಂಡಿದೆ. ಆದರೆ ಯುಪಿಎ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸೋತಿತ್ತು. ಆಗ ಈರುಳ್ಳಿ ಬೆಲೆ 100ತಲುಪಿತ್ತು’ ಎಂದು ಜೇಟ್ಲಿ ಪ್ರತಿಕ್ರಿಯೆ ನೀಡಿದರು.

ಸಂಸತ್‌ಗೆ ಮುತ್ತಿಗೆ ಯತ್ನ:  ಬೆಲೆ ಏರಿಕೆ ಹಾಗೂ ರೈಲ್ವೆ ಪ್ರಯಾಣ ದರ ಏರಿಕೆ  ವಿರುದ್ಧ ಪ್ರತಿಭ­ಟನೆ ನಡೆಸುವುದಕ್ಕಾಗಿ ಸಂಸತ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ಮುಖಂಡರನ್ನು ಪೊಲೀಸರು ಮಧ್ಯದಲ್ಲಿಯೇ ತಡೆದರು.
ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅರವಿಂದರ್‌ ಸಿಂಗ್‌ಲೌಲಿ ನೇತೃ­ತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.