ADVERTISEMENT

ಭಾರತಕ್ಕೆ ದಕ್ಕದ ಎನ್‌ಎಸ್‌ಜಿ ಸದಸ್ಯತ್ವ

ಸೋಲ್‌ನಲ್ಲಿ ಅಂತ್ಯಗೊಂಡ ಸಭೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:48 IST
Last Updated 24 ಜೂನ್ 2016, 19:48 IST
ಭಾರತಕ್ಕೆ ದಕ್ಕದ ಎನ್‌ಎಸ್‌ಜಿ ಸದಸ್ಯತ್ವ
ಭಾರತಕ್ಕೆ ದಕ್ಕದ ಎನ್‌ಎಸ್‌ಜಿ ಸದಸ್ಯತ್ವ   

ಸೋಲ್‌/ತಾಷ್ಕೆಂಟ್‌ (ಪಿಟಿಐ): ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪು (ಎನ್‌ಎಸ್‌ಜಿ) ಸೇರಬೇಕೆಂಬ ಭಾರತದ ಆಸೆ ಕೊನೆಗೂ ಕೈಗೂಡಲಿಲ್ಲ.
ಎನ್‌ಎಸ್‌ಜಿಯ 48 ಸದಸ್ಯ ರಾಷ್ಟ್ರಗಳ ವಾರ್ಷಿಕ ಸಭೆ ಸೋಲ್‌ನಲ್ಲಿ ಶುಕ್ರವಾರ ಕೊನೆಗೊಂಡಿದ್ದು, ಸದಸ್ಯತ್ವ ಬೇಕು ಎಂದು ಕೋರಿ ಭಾರತ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಚೀನಾ ನೇತೃತ್ವದಲ್ಲಿ ಸುಮಾರು 10 ರಾಷ್ಟ್ರಗಳು ‘ತಾಂತ್ರಿಕ’ ಕಾರಣ ಮುಂದಿಟ್ಟು ಭಾರತದ ಸದಸ್ಯತ್ವವನ್ನು ವಿರೋಧಿಸಿವೆ ಎನ್ನಲಾಗಿದೆ.   ಚೀನಾದ ಈ ಕ್ರಮಕ್ಕೆ ಭಾರತ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದೆ.

ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಒಳಗೊಂಡಂತೆ ಒಟ್ಟು 38 ದೇಶಗಳು ಭಾರತಕ್ಕೆ ಬೆಂಬಲ ನೀಡಿದ್ದವು ಎಂದು ಮೂಲಗಳು ತಿಳಿಸಿವೆ. ಎನ್‌ಎಸ್‌ಜಿ ಸೇರಲು ಭಾರತವನ್ನು ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಕೋರಿದ್ದರು. ಆದರೂ ಚೀನಾ ಪಟ್ಟು ಸಡಿಲಿಸಲಿಲ್ಲ.

‘ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದವನ್ನು (ಎನ್‌ಪಿಟಿ) ಪೂರ್ಣ ರೂಪ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬ ನಿಲುವಿಗೆ ಬದ್ಧರಾಗಿದ್ದೇವೆ’ ಎಂದು ವಾರ್ಷಿಕ ಸಭೆಯ  ಬಳಿಕ ಹೊರಡಿಸಿದ ಪ್ರಕಟಣೆಯಲ್ಲಿ ಎನ್‌ಎಸ್‌ಜಿ ತಿಳಿಸಿದೆ.

ಚೀನಾ ಕಾರಣ: ‘ತಾಂತ್ರಿಕ ಕಾರಣಗಳನ್ನು ಮುಂದಿಟ್ಟು  ಒಂದು ದೇಶ ನಮ್ಮ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಲೇ ಇತ್ತು. ಇದರಿಂದ ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ತಪ್ಪಿತು’ ಎಂದು ಚೀನಾದ ಹೆಸರು ಪ್ರಸ್ತಾಪಿಸದೆಯೇ ಭಾರತ ಆ ದೇಶವನ್ನು ಟೀಕಿಸಿದೆ.

‘ಒಂದು ನಿರ್ದಿಷ್ಟ ರಾಷ್ಟ್ರ ಭಾರತದ ಸದಸ್ಯತ್ವವನ್ನು ವಿರೋಧಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಆದರೂ ಭವಿಷ್ಯದಲ್ಲಿ ಭಾರತವನ್ನು ಈ ಗುಂಪಿಗೆ ಸೇರಿಸುವ ಬಗ್ಗೆ ಸಭೆಯಲ್ಲಿ ಸುಮಾರು ಮೂರು ಗಂಟೆ ಚರ್ಚೆ ನಡೆದಿದೆ’ ಎಂದು ವಿದೇಶಾಂಗ ವಕ್ತಾರ ವಿಕಾಸ್‌ ಸ್ವರೂಪ್‌ ತಾಷ್ಕೆಂಟ್‌ನಿಂದ ಶುಕ್ರವಾರ ಹೇಳಿದ್ದಾರೆ.

‘ಎನ್‌ಪಿಟಿಗೆ ಸಹಿ ಹಾಕದಿದ್ದರೂ ಭಾರತವು ಅಣ್ವಸ್ತ್ರ ಪ್ರಸರಣ ತಡೆಗೆ ಬದ್ಧವಾಗಿದೆ. ಭಾರತಕ್ಕೆ ಸದಸ್ಯತ್ವ ನೀಡಿದ್ದಲ್ಲಿ,  ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಣ್ವಸ್ತ್ರ ಪ್ರಸರಣ ತಡೆ ಪ್ರಯತ್ನಕ್ಕೆ ಹೆಚ್ಚಿನ ಬಲ ದೊರೆಯುತ್ತಿತ್ತು’ ಎಂದಿದ್ದಾರೆ.

‘ಭಾರತಕ್ಕೆ ಶೀಘ್ರದಲ್ಲಿ ಸದಸ್ಯತ್ವ ನೀಡುವುದು ಬೇಡ ಎಂಬ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಎನ್‌ಪಿಟಿಗೆ ಸಹಿ ಹಾಕದ ರಾಷ್ಟ್ರಗಳಿಗೆ ಸದಸ್ಯತ್ವ ನೀಡುವ ವಿಚಾರದ ಬಗ್ಗೆ ಚರ್ಚೆ ಮುಂದುವರಿಸಲು ಸದಸ್ಯರು ನಿರ್ಧರಿಸಿದ್ದಾರೆ.

‘ಸಭೆಯಲ್ಲಿ ಪಾಲ್ಗೊಂಡಿದ್ದ 48 ದೇಶಗಳಲ್ಲಿ ಹೆಚ್ಚಿನ ದೇಶಗಳು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಸದಸ್ಯತ್ವ ಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದವು. ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದಿದ್ದಾರೆ.
*
‘ದೇಶಕ್ಕೆ ಮುಜುಗರ’
ನವದೆಹಲಿ (ಪಿಟಿಐ):
ಎನ್‌ಎಸ್‌ಜಿ ವಾರ್ಷಿಕ ಸಭೆಯಲ್ಲಿ ನಡೆದ ಬೆಳವಣಿಗೆಗಳಿಂದ ದೇಶ ‘ಮುಜುಗರ’ ಅನುಭವಿಸಿದೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಅವರನ್ನು ಟೀಕಿಸಿದೆ.

‘ವಿದೇಶ ನೀತಿಯಲ್ಲಿ ಗಾಂಭೀರ್ಯ, ಆಳ ಮತ್ತು ವೈಚಾರಿಕತೆ ಇರಬೇಕು ಎಂಬುದನ್ನು ಅರಿಯಲು ಮೋದಿಗೆ ಇದು ಸಕಾಲ. ಅಂತರರಾಷ್ಟ್ರೀಯ ವ್ಯವಹಾರ ಎಂಬುದು ತಮಾಷೆಯಲ್ಲ’ ಎಂದು ಪಕ್ಷದ ಹಿರಿಯ ವಕ್ತಾರ ಆನಂದ್‌ ಶರ್ಮಾ ಹೇಳಿದ್ದಾರೆ.
*
ಚೀನಾ ಸಮರ್ಥನೆ
ಬೀಜಿಂಗ್‌ (ಪಿಟಿಐ):
 ಎನ್‌ಪಿಟಿಗೆ ಸಹಿ ಹಾಕದ ದೇಶಗಳು ಎನ್‌ಎಸ್‌ಜಿ ಸೇರುವುದನ್ನು ವಿರೋಧಿಸಿದ ತನ್ನ ಕ್ರಮವನ್ನು ಚೀನಾ ಸಮರ್ಥಿಸಿಕೊಂಡಿದೆ.

‘48 ರಾಷ್ಟ್ರಗಳು ಸೇರಿ ರೂಪಿಸಿರುವ ನಿಯಮವನ್ನು ನಾವು ಪಾಲಿಸುತ್ತಿದ್ದೇವೆ.   ಎನ್‌ಎಸ್‌ಜಿಯ ನಿಯಮಗಳು ಯಾವುದೇ ಒಂದು ದೇಶವನ್ನು ಗುರಿಯಾಗಿಸಿಲ್ಲ’ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನ್‌ಯಿಂಗ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.