ADVERTISEMENT

ಭಾರತದಲ್ಲಿ ಮೂರು ಜೈಕಾ ವೈರಸ್ ಪ್ರಕರಣ ದೃಢ

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಭಾರತದಲ್ಲಿ ಮೂರು ಜೈಕಾ ವೈರಸ್ ಪ್ರಕರಣ ದೃಢ
ಭಾರತದಲ್ಲಿ ಮೂರು ಜೈಕಾ ವೈರಸ್ ಪ್ರಕರಣ ದೃಢ   

ನವದೆಹಲಿ: ಅಹಮದಾಬಾದ್‌ನ ಬಾಪುನಗರದಲ್ಲಿ ಗರ್ಭಿಣಿ ಸೇರಿ ಮೂವರಲ್ಲಿ ಜೈಕಾ ವೈರಸ್ ಇರುವ ಪ್ರಕರಣವನ್ನು ವಿಶ್ವ ಆರೋಗ್ಯ ಸಂಸ್ಥೆ  (ಡಬ್ಲ್ಯುಎಚ್‌ಒ) ಶನಿವಾರ ದೃಢಪಡಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ವೈರಸ್ ಪತ್ತೆಯಾಗಿರುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ. 

ಆದರೆ ಭಾರತಕ್ಕೆ ಪ್ರಯಾಣ ನಿರ್ಬಂಧ ಹೇರುವ ಬಗ್ಗೆ ಸಂಸ್ಥೆ ಶಿಫಾರಸು ಮಾಡಿಲ್ಲ. ಅಹಮದಾಬಾದ್‌ನ ಬಿ.ಜೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯದಲ್ಲಿ ವೈರಸ್ ಪತ್ತೆಯಾಗಿತ್ತು. ಬಳಿಕ ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ವೈಜ್ಞಾನಿಕ ಅಧ್ಯಯನ ಕೇಂದ್ರವು (ಎನ್‌ಐವಿ) ಇದೇ ಜನವರಿಯಲ್ಲಿ ಇದನ್ನು ಖಚಿತಪಡಿಸಿತ್ತು ಎಂದು ಪ್ರಕಟಣೆ ತಿಳಿಸಿದೆ.

2016ರ ಫೆಬ್ರುವರಿಯಲ್ಲಿ  ಬಿ.ಜೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 93 ಮಂದಿಯ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆಗೊಳಪಡಿಸಲಾಗಿತ್ತು.
ಕೇಂದ್ರ ಸರ್ಕಾರವು ಈ ಮಾಹಿತಿಯನ್ನು ಮಾರ್ಚ್‌ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಿತ್ತು.

ಅಲ್ಲದೇ, ಜೈಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಪರಿಶೀಲನೆಗೆ ತಾಂತ್ರಿಕ ತಜ್ಞರ ತಂಡವನ್ನು ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.