ADVERTISEMENT

ಭಾರತದ ಮೀನುಗಾರರ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 19:30 IST
Last Updated 3 ಜುಲೈ 2015, 19:30 IST

ನಾಗಪಟ್ಟಣಂ, ತಮಿಳುನಾಡು (ಪಿಟಿಐ): ಶ್ರೀಲಂಕಾದ ಮೀನುಗಾರರು ಭಾರತದ ಮೀನುಗಾರರ ಮೇಲೆ ದಾಳಿ ನಡೆಸಿ ಸುಮಾರು ₹ 6 ಕೋಟಿ ಮೌಲ್ಯದ ಬಲೆಗಳನ್ನು ನಾಶಪಡಿಸಿದ ಘಟನೆ ಇಲ್ಲಿನ ಕೊಡಿಯಾಕರೈ ತೀರದಲ್ಲಿ ನಡೆದಿದೆ.

‘ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ, ಮೀನುಗಾರಿಕೆಗೆ ತೆರಳಿದ್ದ ಎಲ್ಲ 180 ಮೀನುಗಾರರು ಸುರಕ್ಷಿತವಾಗಿ ವಾಪಸಾಗಿದ್ದಾರೆ’ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿ ಶಿವಕುಮಾರ್‌ ತಿಳಿಸಿದ್ದಾರೆ.

‘ಐದು ಬೋಟ್‌ಗಳಲ್ಲಿ ಬಂದ ಶ್ರೀಲಂಕಾದ 15 ಮೀನುಗಾರರು ನಮ್ಮ ಬೋಟ್‌ಗಳನ್ನು ಸುತ್ತುವರಿದು ಏಕಾಏಕಿ ದಾಳಿ ನಡೆಸಿದ್ದಾರೆ. ಮರದ ಕೊರಡುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ಪೆಟ್ರೋಲ್‌ ಬಾಂಬ್‌ ಎಸೆದು ಬೋಟ್‌ಗಳನ್ನು ಸ್ಫೋಟಿಸುವುದಾಗಿ ಬೆದರಿಸಿದ್ದಾರೆ’ ಎಂದು
ಭಾರತೀಯ ಮೀನುಗಾರರ ತಂಡದಲ್ಲಿದ್ದ ಒಬ್ಬಾತ ಹೇಳಿದ್ದಾನೆ.

‘ನಾವು ಹಿಡಿದಿದ್ದ ಎಲ್ಲ ಮೀನುಗಳನ್ನು ಸಮುದ್ರಕ್ಕೆ ಎಸೆದು, ₹ 6 ಕೋಟಿ ಮೌಲ್ಯದ ಬಲೆಗಳನ್ನು ನಾಶ ಮಾಡಿದ್ದಾರೆ. ನಮ್ಮ್ಮಲ್ಲಿದ್ದ ಮೊಬೈಲ್‌ ಫೋನ್‌ ಮತ್ತು ಜಿಪಿಎಸ್‌ ಉಪಕರಣಗಳನ್ನು ಕಿತ್ತುಕೊಂಡಿದ್ದಾರೆ’ ಎಂದು ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ.

‘34 ಬೋಟ್‌ಗಳಲ್ಲಿ 180  ಮೀನುಗಾರರು ಜೂನ್‌ 30ರಂದು ಮೀನುಗಾರಿಕೆಗೆ ತೆರಳಿದ್ದರು. ಅವರೆಲ್ಲರೂ ಶುಕ್ರವಾರ ಬೆಳಿಗ್ಗೆ ತೀರಕ್ಕೆ ಮರಳಿದ್ದಾರೆ. ಮಾತ್ರವಲ್ಲ, ಮೀನುಗಾರಿಕಾ ಇಲಾಖೆ ಮತ್ತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ’ ಎಂದು ಶಿವಕುಮಾರ್‌ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
*
ಬಂಧನ ಅವಧಿ ವಿಸ್ತರಣೆ
ರಾಮೇಶ್ವರಂ, ತಮಿಳುನಾಡು (ಪಿಟಿಐ):
 ಶ್ರೀಲಂಕಾ ನೌಕಾಪಡೆ ಬಂಧಿಸಿರುವ ಭಾರತದ 14 ಮೀನುಗಾರರ ಬಂಧನ ಅವಧಿಯನ್ನು ಲಂಕಾ ನ್ಯಾಯಾಲಯ ಜುಲೈ 17ರ ವರೆಗೆ ವಿಸ್ತರಿಸಿದೆ.

ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಲ್ಲಿ ಲಂಕಾ ನೌಕಾಪಡೆ ಜೂನ್‌ 2ರಂದು ಭಾರತದ ಮೀನುಗಾರರನ್ನು ಬಂಧಿಸಿ, ಮೂರು ಬೋಟ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

‘ಈ ಮೀನುಗಾರರನ್ನು ಮನ್ನಾರ್‌ನಲ್ಲಿರುವ ಜೈಲಿನಲ್ಲಿ ಇರಿಸಲಾಗಿತ್ತು. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಾವುನಿಯಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಮೀನುಗಾರರ ಸಂಸ್ಥೆಯ ಅಧ್ಯಕ್ಷ ಎಸ್‌. ಎಮರಿಟ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT