ನವದೆಹಲಿ (ಪಿಟಿಐ): ತಮ್ಮ ತಾಯಿಗೆ ನೀಡಿದ್ದ ಶಾಲಿನ ಉಡುಗೊರೆಗೆ ಪ್ರತಿಯಾಗಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರಿಗೆ ಬಿಳಿ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮೇ 26ರಂದು ನವದೆಹಲಿಯಲ್ಲಿ ನಡೆದ ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮರಳುವಾಗ ಷರೀಫ್ ಅವರಿಗೆ ಶಾಲು ಉಡುಗೊರೆ ನೀಡಿದ್ದ ಮೋದಿ, ‘ಪಾಕಿಸ್ತಾನಕ್ಕೆ ಮರಳಿದ ನಂತರ ಈ ಉಡುಗೊರೆಯನ್ನು ನಿಮ್ಮ ತಾಯಿ ಶಮೀಮ್ ಅಖ್ತರ್ ಅವರಿಗೆ ತಲುಪಿಸಿ’ ಎಂದು ಕೋರಿದ್ದರು.
ಇದಕ್ಕೆ ಪ್ರತಿಯಾಗಿ ಷರೀಫ್ ಕೂಡಾ ಈಗ ಮೋದಿ ಅವರ ತಾಯಿ ಹೀರಾ ಬೆನ್ ಅವರಿಗೆ ಸೀರೆಯನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಪಾಕಿಸ್ತಾನದಿಂದ ಬಂದ ಬಿಳಿ ಸೀರೆಯ ಜತೆ ಹೀರಾಬೆನ್ ಅವರಿರುವ ಚಿತ್ರ ಈಗಾಗಲೇ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
‘ನವಾಜ್ ಷರೀಫ್ ನನ್ನ ತಾಯಿಗೆ ಸುಂದರವಾದ ಬಿಳಿ ಸೀರೆಯೊಂದನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಅವರಿಗೆ ನಾನು ಆಭಾರಿ. ಆದಷ್ಟು ಬೇಗ ಈ ಸೀರೆಯನ್ನು ನನ್ನ ತಾಯಿಗೆ ತಲುಪಿಸುವೆ’ ಎಂದು ಮೋದಿ ಗುರುವಾಗ ಟ್ವೀಟ್ ಮಾಡಿದ್ದಾರೆ.
ಷರೀಫ್ ಕುರಿತು ಮೋದಿ ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಟ್ವೀಟ್ ಮಾಡಿದ್ದರು. ತಮ್ಮಿಬ್ಬರ ನಡುವಣ ಭಾವುಕ ಕ್ಷಣಗಳು ಮತ್ತು ಮಾತುಕತೆಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.