ADVERTISEMENT

ಮಂಗಳನ ಕಕ್ಷೆ ಸೇರಿದ ‘ಮಾಮ್‌’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2014, 9:14 IST
Last Updated 24 ಸೆಪ್ಟೆಂಬರ್ 2014, 9:14 IST

ಬೆಂಗಳೂರು (ಪಿಟಿಐ/ಐಎಎನ್‌ಎಸ್): ಭಾರತೀಯರಿಗೆ ಇಂದು ಸುದಿನ. ನಿರೀಕ್ಷೆಯಂತೆ ಮಂಗಳ ನೌಕೆಯು ಬುಧವಾರ ಬೆಳಿಗ್ಗೆ ಅಂಗಾರಕನ ಕಕ್ಷೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ಸೇರಿದಂತೆ ಹಲವು ಹಿರಿಯ ವಿಜ್ಞಾನಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

‘ವ್ಯೋಮ ನೌಕೆಯು ಅಂಗಾರಕನ ಕಕ್ಷೆಯನ್ನು 7:55 ನಿಮಿಷಕ್ಕೆ ಯಶಸ್ವಿಯಾಗಿ ತಲುಪಿದೆ’ ಎಂದು ಮಂಗಳಯಾನ ನಿಯಂತ್ರಣ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯೋಮ ನೌಕೆಯ ರೆಡಿಯೋ ಸಂದೇಶಗಳು ಅಮೆರಿಕದ ನಾಸಾ, ಸ್ಪೇನಿನಲ್ಲಿರುವ ಮ್ಯಾಡ್ರೀಡ್‌, ಆಸ್ಟ್ರೇಲಿಯಾದಲ್ಲಿರುವ ಕ್ಯಾನ್‌ಬೆರಾ ಹಾಗೂ ಬೆಂಗಳೂರಿನ ಬ್ಯಾಲಾಳು ರಡಾರ್‌ ಕೇಂದ್ರಗಳಿಗೆ ಲಭಿಸಿದ್ದು, ‘ಮಾಮ್‌’ ಯಶಸ್ವಿಯಾಗಿ ಅಂಗಾರಕ ಕಕ್ಷೆ ತಲುಪಿದೆ ಎಂಬುದು  ಖಚಿತ ಗೊಂಡಿದೆ.

ADVERTISEMENT

ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.  ತನ್ನ ಮೊದಲ ಯತ್ನದಲ್ಲೇ ಮಂಗಳನ ಅಂಗಳವನ್ನು ತಲುಪುವಲ್ಲಿ ಇಸ್ರೋ ಯಶಸ್ವಿಯಾಗಿರುವುದು ವಿಶೇಷ. ಅಂತರಿಕ್ಷ ಕ್ಷೇತ್ರದಲ್ಲಿ ಇದೊಂದು ಮಹತ್ವದ ಮೈಲಿಗಲ್ಲೇ ಸರಿ.

ಅಮೆರಿಕ, ರಷ್ಯಾ ಹಾಗೂ ಯುರೋಪ್ ರಾಷ್ಟ್ರಗಳ ನೌಕೆಗಳು  ಕೂಡ ಅಂಗಾರ ತಲುಪಿವೆಯಾದರೂ ಮೊದಲ ಪ್ರಯತ್ನದಲ್ಲಿ ಯಶ ಕಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.