ADVERTISEMENT

ಮಧ್ಯಪ್ರದೇಶದ ಸಚಿವ ಮಿಶ್ರಾ ಶಾಸಕತ್ವ ರದ್ದು

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಮಧ್ಯಪ್ರದೇಶದ ಸಚಿವ ಮಿಶ್ರಾ ಶಾಸಕತ್ವ ರದ್ದು
ಮಧ್ಯಪ್ರದೇಶದ ಸಚಿವ ಮಿಶ್ರಾ ಶಾಸಕತ್ವ ರದ್ದು   

ನವದೆಹಲಿ: ಚುನಾವಣೆಯ ಖರ್ಚು ವೆಚ್ಚಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಚುನಾವಣಾ ಆಯೋಗವು ಮಧ್ಯಪ್ರದೇಶ ಜಲಸಂಪನ್ಮೂಲ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ನರೋತ್ತಮ್‌ ಮಿಶ್ರಾ ಅವರ ಶಾಸಕತ್ವವನ್ನು ರದ್ದುಪಡಿಸಿದೆ.

ಮುಂದಿನ ಮೂರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದೆ.ಮಧ್ಯಪ್ರದೇಶದ ವಿಧಾನಸಭೆಗೆ 2008ರಲ್ಲಿ ನಡೆದ ಚುನಾವಣೆಯಲ್ಲಿ ‘ಕಾಸಿಗಾಗಿ ಸುದ್ದಿ’ಗೆ ಮಾಡಿರುವ ಖರ್ಚಿನ ವಿವರವನ್ನು ಮಿಶ್ರಾ ಅವರು ಆಯೋಗಕ್ಕೆ ಸಲ್ಲಿಸಿದ್ದ  ವೆಚ್ಚದ ವಿವರದಲ್ಲಿ ಸೇರಿಸಿರಲಿಲ್ಲ.

1951ರ ಪ್ರಜಾಪ್ರತಿನಿಧಿ ಕಾಯ್ದೆಯ 1, ಕಲಂ 7(ಬಿ)ಅಡಿ ಮಿಶ್ರಾ ಅವರು ವಿಧಾನಸಭೆ ಸದಸ್ಯತ್ವ ಕಳೆದುಕೊಳ್ಳುವುದರೊಂದಿಗೆ ಮೂರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ.

ADVERTISEMENT

ಶನಿವಾರದಿಂದ ಜಾರಿಯಾಗುವಂತೆ ಮೂರು ವರ್ಷಗಳ ಅವಧಿಗೆ ಶರ್ಮಾ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿರುವುದನ್ನು ಚುನಾವಣಾ ಆಯೋಗದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಮಿಶ್ರಾ ವಿರುದ್ಧ ಕಾಂಗ್ರೆಸ್‌ನ ರಾಜೇಂದ್ರ ಭಾರತಿ 2009ರಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ   2012ರ ಮೇ ನಲ್ಲಿ ಆಯೋಗಕ್ಕೆ ಹೊಸದಾಗಿ ದೂರು ಸಲ್ಲಿಸಿದ್ದ  ಭಾರತಿ, ಸಾರ್ವಜನಿಕ ಸಭೆಗಳು, ಕ್ಯಾಲೆಂಡರ್‌ ಮತ್ತು ವಾಹನ ಖರೀದಿಸಿದ ಹಾಗೂ ಅವುಗಳಿಗೆ ಇಂಧನ ಹಾಕಿರುವುದರ ಖರ್ಚುಗಳ ಮಾಹಿತಿಯನ್ನು ಮಿಶ್ರಾ ಸೇರಿಸಿರಲಿಲ್ಲ ಎಂದು ದೂರಿದ್ದರು.

ವಿಧಾನಸಭೆ ವ್ಯಾಪ್ತಿಯಲ್ಲಿ ಪ್ರಸಾರ ಹೊಂದಿರುವ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 42 ಕಾಸಿಗಾಗಿ ಸುದ್ದಿಯ ವಿವರಗಳನ್ನೂ ಅವರು ಉಲ್ಲೇಖ ಮಾಡಿದ್ದರು.

ಈ ದೂರಿಗೆ ಸಂಬಂಧಿಸಿದಂತೆ ಚುನಾವಣಾ ಅಯೋಗವು ಜನವರಿ 15, 2015ರಂದು ಮಿಶ್ರಾ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

ಈ ನೋಟಿಸ್‌ ವಿರುದ್ಧ ಮಿಶ್ರಾ ಮಧ್ಯಪ್ರದೇಶ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು ಆದರೆ, ಯಾವುದೇ ಪರಿಹಾರ ಸಿಕ್ಕಿರಲಿಲ್ಲ.

ಮಿಶ್ರಾ ಅವರು ದತಿಯಾ ಕ್ಷೇತ್ರದ ಶಾಸಕರಾಗಿದ್ದಾರೆ. 2008ರ ಚುನಾವಣೆಯಲ್ಲಿ ದತಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಾರತಿ ಅವರು ಮಿಶ್ರಾ ವಿರುದ್ಧ ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.