ADVERTISEMENT

ಮಳೆ, ಬಿರುಗಾಳಿಗೆ ತತ್ತರಿಸಿದ ಉತ್ತರ ಭಾರತ: ಕನಿಷ್ಠ 41 ಸಾವು

ಪಿಟಿಐ
Published 14 ಮೇ 2018, 3:47 IST
Last Updated 14 ಮೇ 2018, 3:47 IST
ಗುರುಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ಭಾನುವಾರ ರಾತ್ರಿ ಸಂಚಾರಕ್ಕೆ ಅಡಚಣೆಯಾಯಿತು – ಪಿಟಿಐ ಚಿತ್ರ
ಗುರುಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ಭಾನುವಾರ ರಾತ್ರಿ ಸಂಚಾರಕ್ಕೆ ಅಡಚಣೆಯಾಯಿತು – ಪಿಟಿಐ ಚಿತ್ರ   

ನವದೆಹಲಿ: ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಆಂಧ್ರ ಪ್ರದೇಶಗಳಲ್ಲಿ ಭಾನುವಾರ ಭಾರಿ ಮಳೆ, ಬಿರುಗಾಳಿ ಮತ್ತು ಸಿಡಿಲಿಗೆ ಕನಿಷ್ಠ 41 ಜನ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಮರಗಳು ಉರುಳಿಬಿದ್ದು ರಸ್ತೆ ಸಂಚಾರ, ನೀರು ತುಂಬಿದ್ದರಿಂದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಿದೆ. ಮೆಟ್ರೊ ರೈಲು ಸಂಚಾರದಲ್ಲೂ ವ್ಯತ್ಯಯವಾಗಿದೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಾಣ ಹಾನಿ ಸಂಭವಿಸಿದ್ದು, 18 ಜನ ಮೃತಪಟ್ಟಿದ್ದಾರೆ. ನಾಲ್ವರು ಮಕ್ಕಳೂ ಸೇರಿದಂತೆ 12 ಜನ ಪಶ್ಚಿಮ ಬಂಗಾಳದಲ್ಲಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ 9 ಮತ್ತು ದೆಹಲಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಅಸ್ಸಾಂ, ಮೇಘಾಲಯ, ಜಾರ್ಖಂಡ್‌ ಮತ್ತಿತರ ರಾಜ್ಯಗಳಲ್ಲೂ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.

ಕರ್ನಾಟಕದಲ್ಲೂ ಮಳೆ: ಕರ್ನಾಟಕದ ಹಲವೆಡೆಯೂ ಭಾನುವಾರ ಮಳೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆಯಾಗಿದೆ. ಹಲವೆಡೆ ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು.

ಹತ್ತು ದಿನಗಳ ಹಿಂದಷ್ಟೇ ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಬಿರುಗಾಳಿಗೆ 134 ಜನ ಬಲಿಯಾಗಿ, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಉತ್ತರ ಪ್ರದೇಶವೊಂದರಲ್ಲೇ 80 ಜನ ಸಾವಿಗೀಡಾಗಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.