ADVERTISEMENT

ಮಹಾರಾಷ್ಟ್ರ: 12 ಮಂದಿ ಗೋರಕ್ಷಕರ ಮೇಲೆ ದಾಳಿ

ಪಿಟಿಐ
Published 7 ಆಗಸ್ಟ್ 2017, 19:30 IST
Last Updated 7 ಆಗಸ್ಟ್ 2017, 19:30 IST

ಅಹ್ಮದ್‌ನಗರ: ಶ್ರೀಗೊಂಡ ನಗರದಲ್ಲಿ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆಹಿಡಿದ ಬಳಿಕ ಇದಕ್ಕೆ ಸಂಬಂಧಿಸಿದಂತೆ 12 ಮಂದಿ ಗೋರಕ್ಷಕರ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ದೌಂಡ್–ಅಹ್ಮದ್‌ನಗರ ರಸ್ತೆಯಲ್ಲಿ ತಡೆಗಟ್ಟಿದ್ದ ಪೊಲೀಸರು, ವಾಹನದ ಮಾಲೀಕರಾದ ವಹೀದ್‌ ಶೇಖ್‌ ಹಾಗೂ ರಜು ಫನ್ನುಭಾಯಿ ಶೇಖ್‌ ಅವರನ್ನು ಬಂಧಿಸಿದ್ದರು.

ವಾಹನದ ಮಾಲೀಕರು ಹಾಗೂ ಇತರರ ವಿರುದ್ಧ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಶ್ರೀಗೊಂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಸಂದರ್ಭ ಠಾಣೆಗೆ ಬಂದ ಪುಣೆಯ ಶಿವಶಂಕರ್ ರಾಜೇಂದ್ರ ಸ್ವಾಮಿ ಹಾಗೂ 11 ಜನ ಗೋರಕ್ಷಕರ ಗುಂಪು, ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರ ಬಳಿ ಕೇಳಿಕೊಂಡರು ಎಂದು ಪೊಲೀಸರೊಬ್ಬರು ತಿಳಿಸಿದ್ದಾರೆ.‌

ADVERTISEMENT

ಸ್ವಾಮಿ ಹಾಗೂ ಇತರ 11 ಜನರು ತಾವು ಅಖಿಲ ಭಾರತೀಯ ಕೃಷಿ ಗೋವು ಸೇವಾ ಸಂಘಕ್ಕೆ ಸೇರಿದವರು ಎಂದು ಹೇಳಿಕೊಂಡರು ಎಂದು ಇನ್‌ಸ್ಪೆಕ್ಟರ್‌‌ ಬಾಜಿರಾವ್‌ ಪವಾರ್‌ ತಿಳಿಸಿದ್ದಾರೆ.

ಕಾರ್ಯಕರ್ತರು ಠಾಣೆಯಿಂದ ಹೊರಹೋದ ಬಳಿಕ, ಸುಮಾರು 50 ಜನರ ಗುಂಪು ಇವರ ಮೇಲೆ ದಾಳಿ ನಡೆಸಿದೆ. ದಾಳಿ ನಡೆಸಿದವರ ಬಳಿ, ಕಸಾಯಿಖಾನೆಗಳಲ್ಲಿ ಬಳಸುವ ಕತ್ತಿ ಹಾಗೂ ಸರಳುಗಳಿದ್ದವು.

ಈ ದಾಳಿ ಸಂಬಂಧ 36 ಜನರ ವಿರುದ್ಧ ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ಕಾಯ್ದೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.