ADVERTISEMENT

ಮಹಿಳೆಯನ್ನು ಗೌರವಿಸುವವರು ಶೌಚಾಲಯ ನಿರ್ಮಿಸಿ: ಮೋದಿ

ಪಿಟಿಐ
Published 23 ಸೆಪ್ಟೆಂಬರ್ 2017, 19:46 IST
Last Updated 23 ಸೆಪ್ಟೆಂಬರ್ 2017, 19:46 IST
ಶಹನ್‌ಶಾಪುರದ ಗ್ರಾಮವೊಂದರಲ್ಲಿ ನಿರ್ಮಿಸಲಾದ ಶಾಚಾಲಯವೊಂದರ ಗುಂಡಿಯ ಕಟ್ಟೆಗೆ ಪ್ರಧಾನಿ ನರೇಂದ್ರ ಮೋದಿ ಸಿಮೆಂಟ್ ಮಿಶ್ರಣವನ್ನು ಹಾಕಿದರು   –ಪಿಟಿಐ ಚಿತ್ರ
ಶಹನ್‌ಶಾಪುರದ ಗ್ರಾಮವೊಂದರಲ್ಲಿ ನಿರ್ಮಿಸಲಾದ ಶಾಚಾಲಯವೊಂದರ ಗುಂಡಿಯ ಕಟ್ಟೆಗೆ ಪ್ರಧಾನಿ ನರೇಂದ್ರ ಮೋದಿ ಸಿಮೆಂಟ್ ಮಿಶ್ರಣವನ್ನು ಹಾಕಿದರು –ಪಿಟಿಐ ಚಿತ್ರ   

ಶಹನ್‌ಶಾಪುರ (ವಾರಾಣಸಿ): ‘ಮಹಿಳೆಯರನ್ನು ಗೌರವಿಸುವವರು ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಕಟ್ಟಿಸುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಇಲ್ಲಿನ ಗ್ರಾಮವೊಂದರಲ್ಲಿ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಬಡವರಿಗಾಗಿ ಶೌಚಾಲಯಗಳನ್ನು ನಿರ್ಮಿಸಲು ಅವಕಾಶ ದೊರೆತದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಸ್ವಚ್ಛತೆಯೇ ಪೂಜೆ. ಶೌಚಾಲಯಗಳು ನಮ್ಮ ಜನರನ್ನು ಖಾಯಿಲೆಗಳಿಂದ ರಕ್ಷಿಸುತ್ತವೆ. ಸ್ವಚ್ಛತೆಯೂ ಬಡವರ ಸೇವೆಯ ಒಂದು ರೂಪ’ ಎಂದು ಅವರು ಹೇಳಿದರು.

‘ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ. ಯಾರೋ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ ಮತ್ಯಾರೋ ಅದನ್ನು ಶುಚಿ ಮಾಡುತ್ತಾರೆ ಎಂಬ ಮನಸ್ಥಿತಿಯಿಂದಾಗಿಯೇ ಭಾರತ ಎಷ್ಟು ಶುಚಿಯಾಗಿರಬೇಕಿತ್ತೋ ಅಷ್ಟು ಶುಚಿಯಾಗಿಲ್ಲ. ಇದು ಕೇವಲ ನಮ್ಮ ಊರು ಚೊಕ್ಕವಾಗಿ ಕಾಣುತ್ತದೆ ಎಂಬುದಲ್ಲ. ಬದಲಿಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ ವಿಚಾರ’ ಎಂದು ವಿವರಿಸಿದರು.

ADVERTISEMENT

‘ಮನೆಯಲ್ಲಿ ಶೌಚಾಲಯವಿದ್ದರೆ ಆ ಕುಟುಂಬಕ್ಕೆ ವಾರ್ಷಿಕ ₹ 50,000ಕ್ಕಿಂತಲೂ ಹೆಚ್ಚು ಹಣ ಉಳಿಯುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ’ ಎಂದು ಮೋದಿ ಮಾಹಿತಿ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಸಮರ: ‘ಅಪ್ರಾಮಾಣಿಕ ವ್ಯಕ್ತಿಗಳು ಮತ್ತು ಭ್ರಷ್ಟಾಚಾರದಿಂದಾಗಿ ಪ್ರಾಮಾಣಿಕರು ಮತ್ತು ಬಡವರು ತೊಂದರೆ ಅನುಭವಿಸುತ್ತಿದ್ದರು. ಭ್ರಷ್ಟಾಚಾರ ಬಡವರನ್ನು ಲೂಟಿ ಮಾಡುತ್ತಿತ್ತು.  ಹೀಗಾಗಿ ನಮ್ಮ ಸರ್ಕಾರ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಮರ ಸಾರಿದೆ’ ಎಂದು ಮೋದಿ ಹೇಳಿದರು.

‘ನಮ್ಮ ವರ್ತಕ ಸಹೋದರರು ಜಿಎಸ್‌ಟಿ ಮತ್ತು ಆಧಾರ್‌ಗೆ ಎಂತಹ ಸಹಕಾರ ನೀಡುತ್ತಿದ್ದಾರೆಂದರೆ ಜನರ ಪ್ರತಿ ಪೈಸೆಯೂ ಜನರ ಕಲ್ಯಾಣಕ್ಕಾಗಿಯೇ ವೆಚ್ಚವಾಗುತ್ತದೆ. ಈ ವಿಚಾರದಲ್ಲಿ ನಾವು ಭಾರಿ ವೇಗದಲ್ಲಿ ಪ್ರಗತಿ ಸಾಧಿಸು ತ್ತಿದ್ದೇವೆ’ ಎಂದರು.

ಇಜ್ಜತ್‌ಘರ್‌ಗೆ ಮೆಚ್ಚುಗೆ

‘ಇಲ್ಲಿನ ಜನ ಮತ್ತು ಸರ್ಕಾರ ಶೌಚಾಲಯಗಳಿಗೆ ಇಜ್ಜತ್‌ಘರ್‌ (ಘನತೆಯ ಮನೆ) ಎಂದು ಮರುನಾಮಕರಣ ಮಾಡಿದ್ದಾರೆ. ನನಗೆ ಈ ಪದ ಬಹಳ ಇಷ್ಟವಾಯಿತು. ಇಂತಹ ಹೆಸರಿಗೆ ಮಾನ್ಯತೆ ನೀಡಿದ ಇಲ್ಲಿನ ಸರ್ಕಾರವನ್ನು ಅಭಿನಂದಿಸುತ್ತೇನೆ. ಎಲ್ಲಿ ಇಜ್ಜತ್‌ಘರ್‌ ಇರುತ್ತದೆಯೋ ಅಲ್ಲಿ ನಮ್ಮ ತಾಯಿ ಮತ್ತು ಸೋದರಿಯರಿಗೆ ಗೌರವ ದೊರೆಯುತ್ತದೆ. ಯಾರು ತಮ್ಮ ಗೌರವದ ಬಗ್ಗೆ ಕಾಳಜಿ ವಹಿಸುತ್ತಾರೋ ಅವರು ಇಜ್ಜತ್‌ಘರ್‌ಗಳನ್ನು ನಿರ್ಮಿಸುತ್ತಾರೆ. ತಮ್ಮ ಮನೆಗಳಲ್ಲಿ ಈಗಾಗಲೇ ಶೌಚಾಲಯಗಳನ್ನು ನಿರ್ಮಿಸಿರುವವರು ಪ್ರಶಂಸೆಗೆ ಅರ್ಹರಾದವರು’ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

2022ಕ್ಕೆ ಎಲ್ಲರಿಗೂ ಮನೆ

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿಗಳಿಗೆ ಪಶು ಆರೋಗ್ಯ ಮೇಳದಲ್ಲೇ ಮೋದಿ ಅವರು ಹಕ್ಕುಪತ್ರಗಳನ್ನು ವಿತರಿಸಿದರು. ‘ದೇಶಕ್ಕೆ ಸ್ವಾತಂತ್ರ್ಯ ಬಂದು 2022ಕ್ಕೆ 75 ವರ್ಷ ತುಂಬುತ್ತದೆ. ಅಂದು ದೇಶದ ಯಾವುದೇ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಬಡವರು ಮನೆಯನ್ನು ಪಡೆಯುತ್ತಾರೆ. ಇದು ಕಷ್ಟದ ಕೆಲಸ. ಆದರೆ ಮೋದಿ ಅಲ್ಲದೆ ಮತ್ತಿನ್ಯಾರು ಈ ಸವಾಲನ್ನು ಸ್ವೀಕರಿಸಲು ಸಾಧ್ಯ’ ಎಂದರು.

‘ವಸತಿರಹಿತರ ಪಟ್ಟಿ ನೀಡಿ ಎಂದು ಸಮಾಜವಾದಿ ಪಕ್ಷದ ಸರ್ಕಾರಕ್ಕೆ ಹೇಳಿದ್ದೆವು. ಬಡವರಿಗೆ ವಸತಿ ಒದಗಿಸಲು ಅವರಿಗೆ ಇಷ್ಟವಿರಲಿಲ್ಲ ಎನಿಸುತ್ತದೆ. ತೀರಾ ಒತ್ತಡ ಹೇರಿದಾಗ ಆ ಸರ್ಕಾರ 10,000 ಕುಟುಂಬಗಳ ಪಟ್ಟಿಯನ್ನು ಮಾತ್ರ ನೀಡಿತ್ತು. ಆದರೆ ಯೋಗಿ ಆದಿತ್ಯನಾಥ ಅವರ ಸರ್ಕಾರ ಲಕ್ಷ ಜನರ ಪಟ್ಟಿ ನೀಡಿದೆ. ಕೋಟ್ಯಂತರ ಮನೆಗಳನ್ನು ನಿರ್ಮಿಸಲು ಕಲ್ಲು, ಇಟ್ಟಿಗೆ, ಕಬ್ಬಿಣ ಎಲ್ಲವೂ ಅಪಾರ ಪ್ರಮಾಣದಲ್ಲಿ ಬೇಕಾಗುತ್ತದೆ. ವಸತಿ ಯೋಜನೆಯಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.