ADVERTISEMENT

ಮಾತೃಭಾಷೆ ಶಿಕ್ಷಣ: ರಾಷ್ಟ್ರಪತಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2015, 20:21 IST
Last Updated 21 ಫೆಬ್ರುವರಿ 2015, 20:21 IST

ನವದೆಹಲಿ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಕೊಡಲು ಅವಕಾಶವಾಗುವಂತೆ ಸಂವಿ­ಧಾನಕ್ಕೆ ಸೂಕ್ತ ತಿದ್ದುಪಡಿ ಮಾಡು­ವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಶನಿವಾರ ಮನವಿ ಮಾಡಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್‌. ಹನುಮಂತಯ್ಯ ಅವರ ಸಮ್ಮುಖದಲ್ಲಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ, ರಾಜ್ಯದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿ­ವರ್ಮ ಕುಮಾರ್‌, ಪಂಜಾಬಿನ ಖ್ಯಾತ ಭಾಷಾ ತಜ್ಞ ಜೋಗಾಸಿಂಗ್‌, ರಾಜ­ಸ್ತಾನದ ಸಾಹಿತಿ ಹಾಗೂ ನಾಟಕಕಾ­ರರಾದ ಭಾನುಭಾರತಿ ಅವರಿದ್ದರು.

ಕರ್ನಾಟಕ ಒಂದರಿಂದ ಐದನೇ ತರಗತಿವರೆಗೆ ಮಕ್ಕಳಿಗೆ ಮಾತೃಭಾಷೆ­ಯಲ್ಲೇ ಶಿಕ್ಷಣ ಕೊಡುವ ನಿರ್ಧಾರ ಮಾಡಿದೆ. ಆದರೆ, ಸುಪ್ರೀಂ ಕೋರ್ಟ್‌ ಶಿಕ್ಷಣ ಮಾಧ್ಯಮ ಆಯ್ಕೆ ಅಧಿಕಾರ­ವನ್ನು ಪೋಷಕರಿಗೆ ನೀಡಿರುವು­ದರಿಂದ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆ­ಯಾಗಿದೆ. ಇದರಿಂದ ಪ್ರಾದೇಶಿಕ ಭಾಷೆಗಳಿಗೆ ಅಪಾಯ ಎದುರಾಗಿದ್ದು, ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ರಾಜ್ಯ ಭಾಷೆಗಳನ್ನು ಉಳಿಸಬೇಕು ಎಂದು ನಿಯೋಗ ರಾಷ್ಟ್ರಪತಿಗೆ ಮನವಿ ಮಾಡಿತು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಣವ್‌ ಮುಖರ್ಜಿ, ಸಮಗ್ರ ಶಿಕ್ಷಣ ನೀತಿಗೆ ಆಗ್ರಹಿಸುವ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು ಎಂದು ಹನುಮಂತಯ್ಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.