ADVERTISEMENT

ಮಿಗ್ ವಿಮಾನ ಪತನ: ಪೈಲಟ್ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2011, 19:30 IST
Last Updated 2 ಡಿಸೆಂಬರ್ 2011, 19:30 IST

ಸಿರ್ಸಾ (ಹರಿಯಾಣ) (ಪಿಟಿಐ): ಭಾರತೀಯ ವಾಯುಪಡೆಗೆ ಸೇರಿದ ಮಿಗ್-21ಯುದ್ಧ ವಿಮಾನವೊಂದು ಇಲ್ಲಿಗೆ ಸಮೀಪದ ಹೊಲವೊಂದರಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ. ವಿಮಾನದ ಪೈಲಟ್ ಪ್ರಾಣ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಎಂದಿನಂತೆ ತರಬೇತಿ ವೈಮಾನಿಕ ದಾಳಿಯಲ್ಲಿ ನಿರತವಾಗಿದ್ದ ವಿಮಾನ ಸಿರ್ಸಾದಿಂದ 40 ಕಿ.ಮೀ ದೂರದಲ್ಲಿರುವ ಮನಿಯಾ ಗ್ರಾಮದಲ್ಲಿ ಅಪಘಾತಕ್ಕೀಡಾಯಿತು ಎಂದು ಪೊಲೀಸ್ ಮತ್ತು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

`ಸಿರ್ಸಾ ವಾಯು ನೆಲೆಯಿಂದ ಎಂದಿನಂತೆ ತರಬೇತಿಗಾಗಿ ಮಿಗ್ ಯುದ್ಧವಿಮಾನ ಟೇಕ್ ಆಫ್ ಆಗಿತ್ತು. ಮೇಲಕ್ಕೇರಿದ ಸ್ವಲ್ಪ ಹೊತ್ತಿನಲ್ಲೇ ಪತನವಾಯಿತು~ ಎಂದು ವಾಯುಪಡೆಯ ವಕ್ತಾರರೊಬ್ಬರು ದೆಹಲಿಯಲ್ಲಿ ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಲು ವಾಯುಪಡೆ ತನಿಖೆಗೆ ಆದೇಶಿಸಿದೆ ಎಂದೂ ಹೇಳಿದ್ದಾರೆ.

ಈ ವರ್ಷದಲ್ಲಿ ಅಪಘಾತಕ್ಕೀಡಾಗುತ್ತಿರುವ ಏಳನೇ ಯುದ್ಧವಿಮಾನ ಇದಾಗಿದೆ. ಮಿಗ್-21 ಸರಣಿಯಲ್ಲಿ ಪತನಗೊಂಡ ಆರನೇ ಯುದ್ಧವಿಮಾನ ಇದಾಗಿದೆ.

ಮಿಗ್ ಯುದ್ಧವಿಮಾನಗಳು ಸರಣಿ ಅಪಘಾತಕ್ಕೀಡಾಗುತ್ತಿರುವುದನ್ನು  ಪರಿಗಣಿಸಿರುವ ವಾಯುಪಡೆ, 2017ರ ವೇಳೆಗೆ ಅವುಗಳ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಯೋಚಿಸಿದೆ.

ಅಲ್ಲದೇ ಮುಂದಿನ ವರ್ಷದಿಂದ ಕೇವಲ ಅನುಭವಿ ಪೈಲಟ್‌ಗಳಿಗೆ ಮಾತ್ರ ಈ ವಿಮಾನಗಳನ್ನು ಚಲಾಯಿಸಲು ಅವಕಾಶ ನೀಡಲು ಚಿಂತನೆ ನಡೆಸಿದೆ.

1960ದಿಂದೀಚೆಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಿರುವ ಒಟ್ಟು 976 ಮಿಗ್021 ವಿಮಾನಗಳಲ್ಲಿ ಸುಮಾರು ಅರ್ಧದಷ್ಟು ವಿಮಾನಗಳು ಅಪಘಾತಕ್ಕೀಡಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.