ADVERTISEMENT

ಮುಂದುವರಿದ ಹಿಂಸಾಚಾರ

ಅಸ್ಸಾಂ: ಸತ್ತವರ ಸಂಖ್ಯೆ 78ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ಗುವಾಹಟಿ (ಪಿಟಿಐ): ಅಸ್ಸಾಂನಲ್ಲಿ ಬೋಡೊ ಉಗ್ರರು ನಡೆಸಿದ ಹತ್ಯಾಕಾಂಡ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿದೆ.
ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಂತೆ ಇರುವ ಸೋನಿತ್‌ಪುರ ಜಿಲ್ಲೆಯ ಮೈತಾಲು ಬಸ್ತಿ­ಯಲ್ಲಿ ಗುರುವಾರ ಬೆಳಿಗ್ಗೆ ಆರು ಮೃತದೇಹಗಳು ಪತ್ತೆ­ಯಾಗಿವೆ ಎಂದು ಪೊಲೀಸ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಹತ್ಯಾಕಾಂಡದಿಂದ ರೊಚ್ಚಿಗೆದ್ದು ಪ್ರತಿಭಟನೆಯಲ್ಲಿ ನಿರತರಾಗಿದ್ದ ಆದಿವಾಸಿಗಳನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಬುಧವಾರ ಕೊಕ್ರಝಾರ್‌ನಲ್ಲಿ ಮೂವರು ಆದಿವಾಸಿಗಳು ಬಲಿ­ಯಾಗಿ­ದ್ದಾರೆ. ಮಾಣಿಕ್‌ಪುರ ಮತ್ತು ದಿಮಾಪುರ ಪ್ರದೇಶಗಳಲ್ಲಿ ಕಗ್ಗೊಲೆಗೆ ಪ್ರತೀಕಾರವಾಗಿ ಆದಿವಾಸಿ­ಗಳು ನಡೆಸಿದ ಹಿಂಸಾಚಾರದಲ್ಲಿ ಬೋಡೊ ಸಮುದಾಯದ ನಾಲ್ವರು ಮೃತಪಟ್ಟಿದ್ದಾರೆ.

ಗುರುವಾರ ಬೆಳಿಗ್ಗೆ ಕೊಕ್ರಝಾರ್‌ನ ಗೊಸ್ಸಾಯ್‌­ಗಾವ್ ಪ್ರದೇಶದಲ್ಲಿ ಹಿಂಸಾಕೃತ್ಯಗಳು ನಡೆದ ವರದಿಯಾಗಿದ್ದು, ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಲಾ­ಗಿದ್ದರೂ ಬೋಡೊ ಸಮುದಾಯದ ಹಲವು ಮನೆಗಳಿಗೆ ಆದಿವಾಸಿಗಳು ಬೆಂಕಿ ಹಚ್ಚಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಹಿಂಸಾಚಾರ ಸಂಭವಿಸಿರುವ ಸೋನಿತ್‌ಪುರ ಮತ್ತು ಚಿರಾಂಗ್‌ ಜಿಲ್ಲೆಗಳಾದ್ಯಂತ ಹಾಗೂ ಧುಬ್ರಿ ಮತ್ತು ಬಕ್ಸಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ: ತಾಂತ್ರಿಕ ಸಮಸ್ಯೆಯಿಂದಾಗಿ ಗೃಹಸಚಿವ ರಾಜನಾಥ್‌ ಸಿಂಗ್‌ ತೆರಳುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ ಘಟನೆ ತೇಜಪುರ ಐಎಎಫ್‌ ನೆಲೆಯಲ್ಲಿ ನಡೆದಿದೆ.

ಕೊಕ್ರಝಾರ್‌ ಜಿಲ್ಲೆಯತ್ತ ಹೊರಟಿದ್ದ ಹೆಲಿ­ಕಾಪ್ಟರ್‌­ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ತಕ್ಷಣ ತೇಜಪುರದ ನೆಲೆಗೆ ಮರಳಿ ತಂದಿಳಿಸಲಾಯಿತು. ಕೊಕ್ರಝಾರ್‌ನಿಂದ ಬೇರೆ ಹೆಲಿಕಾಪ್ಟರ್‌ ಬರುವವ­ರೆಗೂ ಅವರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.  

ರಾಜನಾಥ್‌ ಸಿಂಗ್‌ ಅವರು ಸೋನಿತ್‌ಪುರ ಮತ್ತು ಕೊಕ್ರಝಾರ್‌ಗೆ ತೆರಳಿ ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿದ್ದರು. ಇದೇ ವೇಳೆ ಅವರು ಭದ್ರತಾ ಸಿಬ್ಬಂದಿಯನ್ನೂ ಭೇಟಿ ಮಾಡಿದ್ದರು. ಬೋಡೊ ಉಗ್ರರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರವು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

ಕಟ್ಟುನಿಟ್ಟಿನ ಕ್ರಮ
ಗುವಾಹಟಿ/ಸೋನಿತ್‌ಪುರ:
ಅಮಾಯಕ ಆದಿ­ವಾಸಿ­ಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಬೋಡೊ­ಲ್ಯಾಂಡ್‌ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ  ಉಗ್ರರ (ಎನ್‌ಡಿಎಫ್‌ಬಿ) ಕುರಿತು ಕಠಿಣ ನಿಲುವು ತಾಳಿರುವ ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಅವರು,  ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಜತೆಗೆ ಘಟನೆ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ತನಿಖೆ ನಡೆಸಲಾಗುವುದು ಎಂದು  ಅವರು ತಿಳಿಸಿದರು.
ಹಿಂಸಾಕೃತ್ಯ ನಡೆದ ಸೋನಿತ್‌ಪುರ ಜಿಲ್ಲೆಯ ಬಿಸ್ವನಾಥ್ ಚರೈಲಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂತಹ ‘ಕೃತಕ ಭಯೋತ್ಪಾದನೆ ಸೃಷ್ಟಿ’ಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. ‘ಘಟನೆಯ ಕುರಿತು ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದು, ಪರಿಣಾಮಕಾರಿ­ಯಾಗಿ ನಿಯಂತ್ರಿಸಲಿದ್ದೇವೆ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವುದು ಖಚಿತ. ಆದರೆ ಯಾವಾಗ ಪ್ರಾರಂಭಿಸುತ್ತೇವೆ ಎಂದು ತಿಳಿಸಲು ಸಾಧ್ಯವಿಲ್ಲ’ ಎಂದರು.

‘ಎನ್‌ಡಿಎಫ್‌ಬಿ ನಡೆಸಿದ ಹತ್ಯಾಕಾಂಡ ಉಗ್ರರ ತಂಡ ನಡೆಸಿದ ಸಾಮಾನ್ಯ ಹಿಂಸಾಕೃತ್ಯವಲ್ಲ. ಇದು ಕೃತಕ ಸೃಷ್ಟಿತ ಭಯೋತ್ಪಾದನೆಯಾಗಿದ್ದು, ಇದನ್ನು ಸಮರ್ಪಕವಾಗಿ ನಿಭಾಯಿಸಲಿದ್ದೇವೆ’ ಎಂದರು.

ಹೆಲಿಕಾಪ್ಟರ್‌ಗಳ ನಿಯೋಜನೆ
ಬೋಡೊ ಉಗ್ರರ ಬೇಟೆಗಾಗಿ ಸೇನೆಯು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಬುಡಕಟ್ಟು ಜನರ ಹತ್ಯಾಕಾಂಡ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ತನಿಖೆ ನಡೆಸಲಿದೆ. ಬೋಡೊ ಉಗ್ರರನ್ನು ನಿಗದಿತ ಕಾಲ­ಮಿತಿ­ಯಲ್ಲಿ ಹತ್ತಿಕ್ಕಲು ಕ್ರಮಗಳನ್ನು ತೆಗೆದು­ಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದರು.

ಬೋಡೊ ಉಗ್ರರ ಜತೆ ಮಾತುಕತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಅಸ್ಸಾಂ­ನಲ್ಲಿ ಇರುವುದು ಆಂತರಿಕ ದಂಗೆಯ ಸಮಸ್ಯೆಯಲ್ಲ. ಇಲ್ಲಿರುವುದು ಭಯೋತ್ಪಾದನೆಯ ಸಮಸ್ಯೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT