ADVERTISEMENT

ಮುಖ್ಯಮಂತ್ರಿ ಗಾದಿಗೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಚಂಡೀಗಡ (ಪಿಟಿಐ): ಹರಿಯಾಣ­ದಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ದೊರೆ­ಯುತ್ತಲೇ ಮುಖ್ಯಮಂತ್ರಿ ಗಾದಿಗಾಗಿ ತೆರೆ ಮರೆಯಲ್ಲಿ  ಭಾರಿ ಪೈಪೋಟಿ ಆರಂಭವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರ  ರಚನೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿಯವರೆಗೂ   ಪಕ್ಷದ ಯಾವೊಬ್ಬ ನಾಯಕನೂ  ಮುಖ್ಯ­ಮಂತ್ರಿ  ಸ್ಥಾನದ ಆಕಾಂಕ್ಷಿ ಎಂದು ಬಹಿ­ರಂಗವಾಗಿ ಹೇಳಿಕೊಂಡಿಲ್ಲ. ಈ ಕುರಿತು ಬಿಜೆಪಿ ವರಿಷ್ಠರು ಕೂಡ ಮೌನ­ವಾ­ಗಿದ್ದು, ಮುಖ್ಯಮಂತ್ರಿ ಯಾರಾ­ಗುತ್ತಾರೆ ಎಂಬ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ.

ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹಾಗೂ ಪಕ್ಷದ  ಉಪಾಧ್ಯಕ್ಷ  ದಿನೇಶ್ ಶರ್ಮಾ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಹೊಸ ಮುಖ್ಯಮಂತ್ರಿ  ಆಯ್ಕೆ ಹೊಣೆಯನ್ನು ಈ ಇಬ್ಬರೂ ನಾಯಕರಿಗೆ ವಹಿಸಲಾಗಿದೆ. ಹೊಸ­ದಾಗಿ ಆಯ್ಕೆಯಾದ 47 ಬಿಜೆಪಿ ಶಾಸ­ಕರ ಸಭೆಯನ್ನು ಮಂಗಳ­ವಾರ ಕರೆಯ­ಲಾಗಿದ್ದು, ಸಭೆಯಲ್ಲಿ ಮುಖ್ಯ­ಮಂತ್ರಿ ಅಭ್ಯರ್ಥಿ ಬಗ್ಗೆ ಅಂತಿಮ  ತೀರ್ಮಾನ ಹೊರಬೀಳುವ ಸಾಧ್ಯತೆ­ಯಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಮ್‌ವಿಲಾಸ್ ಶರ್ಮಾ, ಆರ್‌ಎಸ್‌ಎಸ್‌ ಮಾಜಿ ಸದಸ್ಯ ಎಂ.ಎಲ್. ಖಟ್ಟರ್, ವಕ್ತಾರ ಕ್ಯಾಪ್ಟನ್ ಅಭಿಮನ್ಯು, ಕಿಸಾನ್ ಘಟಕದ ಅಧ್ಯಕ್ಷ ಓಂಪ್ರಕಾಶ್‌ ಧನಕರ್‌ ಹಾಗೂ ಶಾಸಕ ಅನಿಲ್‌ ವಿಜ್‌ ಅವರು ಮುಖ್ಯಮಂತ್ರಿ­ಯಾಗಲು ತೆರೆ ಮರೆಯಲ್ಲಿ  ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ. ಹೊಸ ಮುಖ್ಯಮಂತ್ರಿ ಇದೇ 22ರಂದು  ಕೆಲವು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹರಿಯಾಣ: ಶೇ 83ರಷ್ಟು ಶಾಸಕರು ಕೋಟ್ಯಧಿಪತಿಗಳು
ಚಂಡೀಗಡ (ಐಎಎನ್‌ಎಸ್‌): ಹರಿಯಾಣ ವಿಧಾನಸಭೆಗೆ ನೂತನ­ವಾಗಿ ಆಯ್ಕೆಯಾದ ಶಾಸಕರಲ್ಲಿ ಶೇ ೮೩ರಷ್ಟು ಮಂದಿ ಕೋಟ್ಯಧಿಪತಿಗಳು! ನೂತನ ವಿಧಾನಸಭೆಗೆ ಆಯ್ಕೆ­ಯಾದ ಶಾಸಕರ ಸರಾಸರಿ ಆಸ್ತಿ ಮೌಲ್ಯ ರೂ೧೨.೯೭ ಕೋಟಿ ಎಂದು ಹರಿಯಾಣ ಚುನಾವಣಾ ಕಣ್ಗಾವಲು (ಎಚ್‌­ಇಡಬ್ಲ್ಯು) ಹಾಗೂ ಪ್ರಜಾ­ಸತ್ತಾತ್ಮಕ ಸುಧಾರಣಾ ಸಂಸ್ಥೆ (ಎಡಿಆರ್‌) ಹೇಳಿದೆ.

೨೦೦೯ರ ಚುನಾವಣೆಯಲ್ಲಿ ಆಯ್ಕೆ­ಯಾಗಿದ್ದ ಜನಪ್ರತಿನಿಧಿಗಳ ಸರಾಸರಿ ಆಸ್ತಿ ಮೌಲ್ಯ ರೂ ೬.೭೧ ಕೋಟಿ ಇತ್ತು.
ಪಕ್ಷವಾರು ತೆಗೆದುಕೊಂಡರೆ ಐಎನ್‌ಎಲ್‌ಡಿ ಅಭ್ಯರ್ಥಿಗಳೇ ಹೆಚ್ಚು ಶ್ರೀಮಂತರು. ಇವರ ಸರಾಸರಿ ಆಸ್ತಿ ಮೌಲ್ಯ ರೂ೧೩.೦೧ ಕೋಟಿ.  ಕಾಂಗ್ರೆಸ್‌್ ಹಾಗೂ ಬಿಜೆಪಿ ಶಾಸಕರ ಆಸ್ತಿ ಮೌಲ್ಯ ಕ್ರಮವಾಗಿ ರೂ ೧೨.೪೫ ಕೋಟಿ ಮತ್ತು ರೂ ೧೦.೫ ಕೋಟಿ. ಇನ್ನು ಐವರು ಪಕ್ಷೇತರ ಶಾಸಕರು ತಲಾ ಸರಾಸರಿ ರೂ ೧೩.೯೫ ಕೋಟಿ ಆಸ್ತಿ ಹೊಂದಿದ್ದಾರೆ.

ಈ ಬಾರಿ ೨೧ ಶಾಸಕರು ಮರು ಆಯ್ಕೆಯಾಗಿದ್ದಾರೆ. ೨೦೦೯ರಲ್ಲಿ ಮರು ಆಯ್ಕೆಯಾಗಿದ್ದ  ಶಾಸಕರ ಸರಾಸರಿ ಆಸ್ತಿ ರೂ ೪ ಕೋಟಿ ಇತ್ತು. ಈಗ ಈ ಪ್ರಮಾಣ ರೂ ೧೩.೮ ಕೋಟಿಗೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.