ADVERTISEMENT

ಮುಸ್ಲಿಂ ಕೋಟಾ: ಒವೈಸಿ ವಿರುದ್ಧ ಶಿವಸೇನೆ ಕಿಡಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 11:31 IST
Last Updated 3 ಮಾರ್ಚ್ 2015, 11:31 IST

ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿರುವ ಅಖಿಲ ಭಾರತ ಮಜ್ಲಿಸ್-ಎ- ಇತ್ತೆ­ಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಶಿವಸೇನೆ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ.

ಧಾರ್ಮಿಕತೆಯ ಆಧಾರದಲ್ಲಿ ಮೀಸಲಾತಿ ಬಯಸುವುದಾದರೆ ಅವರು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಬೇಡಿಕೆ ಪೂರೈಸಿಕೊಳ್ಳಬೇಕು ಎಂದು  ವ್ಯಂಗ್ಯವಾಡಿದೆ.

ಅಲ್ಲದೇ, ಒವೈಸಿ ಅವರದ್ದು ‘ದ್ವೇಷ’ ಭಾಷಣ ಎಂದು ಟೀಕಿಸಿರುವ ಶಿವಸೇನೆ, ದೇವೇಂದ್ರ ಫಡಣವೀಸ್ ಸರ್ಕಾರವು ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ADVERTISEMENT

‘ಮರಾಠರಿಗೆ ಸಮನಾಗಿ ಮುಸ್ಲಿಮರಿಗೆ ಮೀಸಲಾತಿ ಸಿಗಬೇಕು ಎಂದು ಅಸಾದುದ್ದೀನ ಒವೈಸಿ ಕೇಳುತ್ತಿದ್ದಾರೆ. ಅಂಥ ಒತ್ತಾಯವೇ ಭಾರತದಿಂದ ಪಾಕಿಸ್ತಾನ ಪ್ರತ್ಯೇಕಗೊಳ್ಳಲು ಕಾರಣವಾಗಿತ್ತು. ಹಿಂದೂ ವಿರೋಧಿಗಳ ಮುಸ್ಲಿಮರ ಒಂದು ವರ್ಗ ಪಾಕಿಸ್ತಾನದ ಮೇಲೆ ನಿಯಂತ್ರಣ ಸಾಧಿಸುವಂತೆ ಒತ್ತಾಯಿಸಿತು. ಆದ್ದರಿಂದ ಪಾಕಿಸ್ತಾನದಲ್ಲಿ ಧಾರ್ಮಿಕತೆಯ ಆಧಾರದ ತಮ್ಮ ಬೇಡಿಕೆಯನ್ನು ಪೂರೈಸಿ ಕೊಳ್ಳಲು ಓವೈಸಿ ಅವರು ಪ್ರಯತ್ನಿಸಬಹುದು’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನೆ ಬರೆದುಕೊಂಡಿದೆ.

ಅಲ್ಲದೇ, ‘ಮುಸ್ಲಿಮರು ಏಕರೂಪದ ನಾಗರಿಕ ಸಂಹಿತೆಯನ್ನು ಗೌರವಿಸಬೇಕು. ಕಾಶ್ಮೀರಕ್ಕೆ 370ನೇ ಕಲಂನ ಮುಂದುವರಿಕೆಯ ಬೇಡಿಕೆಯನ್ನು ನಿಲ್ಲಿಸಬೇಕು’ ಎಂದಿರುವ ಶಿವಸೇನೆ, ‘ಧರ್ಮದ ಆಧಾರದಲ್ಲಿ ಮೀಸಲಾತಿಗೆ ಒತ್ತಾಯಿಸುವ ಪ್ರಯತ್ನ ಫಲ ನೀಡದು’ ಎಂದು ಅಭಿಪ್ರಾಯ ಪಟ್ಟಿದೆ.

ನಾಗಪುರದಲ್ಲಿ ಕಳೆದ ವಾರ ಸಾರ್ವಜನಿಕ ಸಭೆಯೊಂದರಲ್ಲಿ ಸಂಸದ ಒವೈಸಿ ಅವರು, ಮಹಾರಾಷ್ಟ್ರದಲ್ಲಿ ಸರ್ಕಾರಿ ಕೆಲಸ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.