ADVERTISEMENT

ಮುಸ್ಲಿಂ ಮಹಿಳೆಗೂ ಜೀವನಾಂಶ

ಸಿಆರ್‌ಪಿಸಿ ಸೆಕ್ಷನ್‌ 125 ಅಡಿ ಅವಕಾಶ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2015, 20:09 IST
Last Updated 7 ಏಪ್ರಿಲ್ 2015, 20:09 IST

ನವದೆಹಲಿ (ಪಿಟಿಐ): ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಮಾಜಿ ಪತಿಯಿಂದ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 125ರ ಅಡಿಯಲ್ಲಿ ಜೀವನಾಂಶ ಪಡೆಯುವುದಕ್ಕೆ ಅರ್ಹಳು ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

‘ಪತಿ ಆರೋಗ್ಯವಂತನಾಗಿದ್ದಲ್ಲಿ, ಆರ್ಥಿಕ ಅನುಕೂಲ ಹೊಂದಿದ್ದಲ್ಲಿ  ಪತ್ನಿಯನ್ನು ನೋಡಿಕೊಳ್ಳುವುದು ಆತನ ಜವಾಬ್ದಾರಿಯಾಗುತ್ತದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 125ರ ಪ್ರಕಾರ ಪತ್ನಿಗೆ ಜೀವನಾಂಶ ಪಡೆಯುವ ಸಂಪೂರ್ಣ ಹಕ್ಕು ಇದೆ.  ಇದು ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೂ ಅನ್ವಯವಾ ಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಹಾಗೂ ಪಿ.ಸಿ.ಪಂತ್‌ ಪೀಠ ಹೇಳಿದೆ.

‘ಮುಸ್ಲಿಂ ಮಹಿಳೆ ವಿಚ್ಛೇದನ ಪಡೆದ ಬಳಿಕ ಮೂರು ತಿಂಗಳವರೆಗೆ (ಇದ್ದತ್‌ ಅವಧಿ) ಮಾತ್ರವಲ್ಲ, ಮರುಮದುವೆ ಆಗುವವರೆಗೂ ಮಾಜಿ ಪತಿಯಿಂದ ಜೀವನಾಂಶ ಪಡೆಯುವುದಕ್ಕೆ ಅರ್ಹಳು’ ಎಂದೂ ಪೀಠ ಸ್ಪಷ್ಟವಾಗಿ ತಿಳಿಸಿದೆ. ಸೆಕ್ಷನ್‌ 125, ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ಪೀಠ ಸಮರ್ಥಿಸಿದೆ.

ಜೀವನಾಂಶ ಕೋರಿ  1998 ರಲ್ಲಿಯೇ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು 2012ರ ಫೆಬ್ರುವರಿ ವರೆಗೆ ಇತ್ಯರ್ಥ ಮಾಡದೇ ಇರುವುದಕ್ಕೆ ಪೀಠವು ಕಳವಳ ವ್ಯಕ್ತಪಡಿಸಿತು.

‘ನ್ಯಾಯಾಲಯವು ಮಧ್ಯಾಂತರ ಪರಿಹಾರಕ್ಕೂ ಆದೇಶ ನೀಡದಿರುವುದು ಆಘಾತಕಾರಿ ವಿಷಯ. ವೈವಾಹಿಕ ಮನಸ್ತಾಪಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಸ್ಥಾಪನೆಯಾಗಿರುವ ಕೌಟುಂಬಿಕ ನ್ಯಾಯಾಲಯಗಳು ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡಲು ಉದಾಸೀನ ತೋರುತ್ತಿವೆ’ ಎಂದೂ ಪೀಠ  ಹೇಳಿತು.

‘ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 125, ಮುಸ್ಲಿಂ ಮಹಿಳೆಯರಿಗೂ ಅನ್ವಯವಾಗುತ್ತದೆ. ಕೌಟುಂಬಿಕ ನ್ಯಾಯಾಲಯಕ್ಕೆ  ಈ ವಿಚಾರ ನಿರ್ಧರಿಸುವ ಅಧಿಕಾರ ಇದೆ’ ಎಂದು ಮಹಿಳೆಯ ಪರ ವಕೀಲರು ವಾದಿಸಿದರು.

ಶಹಬಾನೊ ಪ್ರಕರಣ: 1985ರಲ್ಲಿ ಶಹಬಾನೊ ಪ್ರಕರಣದಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪು ಶರಿಯತ್‌ಗೆ (ಮುಸ್ಲಿಂ  ವೈಯಕ್ತಿಕ ಕಾನೂನು) ವಿರುದ್ಧವಾಗಿದೆ ಎಂದು ಮುಸ್ಲಿಮರಿಂದ  ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಆ ಬಳಿಕ 1986ರಲ್ಲಿ ರಾಜೀವ್‌ ಗಾಂಧಿ ಸರ್ಕಾರವು  ಸುಪ್ರೀಂಕೋರ್ಟ್‌ ತೀರ್ಪನ್ನು ದುರ್ಬಲಗೊಳಿಸುವಂತೆ ಸಂಸತ್ತಿನಲ್ಲಿ ಕಾಯ್ದೆಯೊಂದನ್ನು ಅಂಗೀಕರಿಸಿತ್ತು.
*
ಏನಿದು ಪ್ರಕರಣ?
ಲಖನೌದ ಶಮೀಮಾ ಫಾರೂಕಿ ಅವರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪತಿ ಶಾಹೀದ್‌ ಖಾನ್‌ ಇವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ನಂತರ ಇನ್ನೊಂದು ಮದುವೆಯಾದ. ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಖಾನ್‌ ತಿಂಗಳಿಗೆ ₹ 17,654 ಸಂಬಳ ಪಡೆಯುತ್ತಿದ್ದ.  ಶಮೀಮಾ ಈತನಿಂದ ಜೀವನಾಂಶ ಕೋರಿ 1998ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.  ತಿಂಗಳಿಗೆ ₹ 2000 ಜೀವನಾಂಶ ಕೊಡುವಂತೆ ಖಾನ್‌ಗೆ ಕೋರ್ಟ್‌್ ನಿರ್ದೇಶನ ನೀಡಿತ್ತು.

ಶಮೀಮಾ ಅವರಿಗೆ ಜೀವನೋಪಾಯಕ್ಕೆ ಬೇರೆ ಏನೂ ಇಲ್ಲ ಎನ್ನುವುದು ಗೊತ್ತಾದಾಗ ಕೋರ್ಟ್‌ ಈ ಮೊತ್ತವನ್ನು ನಂತರದಲ್ಲಿ ₹ 4000ಕ್ಕೆ ಏರಿಸಿತ್ತು. ಇದನ್ನು ಪ್ರಶ್ನಿಸಿ ಖಾನ್‌  ಹೈಕೋರ್ಟ್‌ ಮೊರೆ ಹೋಗಿದ್ದ.  ತಾನು ಸೇನೆಯಿಂದ ನಿವೃತ್ತನಾಗಿದ್ದು ಈ ಮೊತ್ತ ಹೊರೆಯಾಗುತ್ತದೆ ಎಂದು ಕೋರ್ಟ್‌ ಮುಂದೆ ಹೇಳಿಕೊಂಡಿದ್ದ. ಆದ ಕಾರಣ ಹೈಕೋರ್ಟ್‌ ಈ ಮೊತ್ತವನ್ನು ₹ 2,000 ಇಳಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಶಮೀಮಾ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಸಿಆರ್‌ಪಿಸಿಯ 125 ಸೆಕ್ಷನ್‌: ಯಾವುದೇ ವ್ಯಕ್ತಿ ಆರ್ಥಿಕವಾಗಿ ಸಬಲನಾಗಿದ್ದರೂ ಅಸಹಾಯಕರಾದ ತನ್ನ ಪತ್ನಿ, ಮಕ್ಕಳು ಮತ್ತು ಪಾಲಕರನ್ನು ನಿರ್ಲಕ್ಷ್ಯಿಸುತ್ತಿದ್ದರೆ ಅವರಿಗೆ  ಜೀವನಾಂಶ ನೀಡುವ ಆದೇಶ ನೀಡುತ್ತದೆ.
*
ಜೀವನಾಂಶ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ನ್ಯಾಯಾಲಯಗಳು ಆದಷ್ಟು ಬೇಗ ವಿಲೇವಾರಿ ಮಾಡಬೇಕು.
- ಸುಪ್ರೀಂಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.