ADVERTISEMENT

ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶ ಮತ್ತೊಂದಿಲ್ಲ: ಶಹನವಾಜ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 11:47 IST
Last Updated 24 ನವೆಂಬರ್ 2015, 11:47 IST

ಮುಂಬೈ (ಪಿಟಿಐ): ‘ಮುಸ್ಲೀಮರಿಗೆ   ಭಾರತಕ್ಕಿಂತ ಉತ್ತಮವಾದ ದೇಶ ಮತ್ತೊಂದಿಲ್ಲ’ ಎಂದಿರುವ ಬಿಜೆಪಿ  ಮುಖಂಡ ಸೈಯದ್‌ ಶಹನವಾಜ್‌ ಹುಸೇನ್‌, ಅಸಹಿಷ್ಣುತೆ ಬಗೆಗಿನ ಬಾಲಿವುಡ್‌ ನಟ ಅಮೀರ್‌ ಖಾನ್‌ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೀರ್‌ ಖಾನ್‌  ಹೇಳಿಕೆ ತೀವ್ರ ಅಚ್ಚರಿ ಉಂಟುಮಾಡಿದೆ. ಭಾರತ ಬಿಟ್ಟು ಅಮೀರ್‌ ಮತ್ತು ಕುಟುಂಬ ಇನ್ನೆಲ್ಲಿಗೆ  ತಾನೇ ಹೋಗಲು ಸಾಧ್ಯ? ಭಾರತೀಯ ಮುಸ್ಲೀಮರಿಗೆ ಹಿಂದೂಗಳಿಗಿಂತ ಉತ್ತಮವಾದ ನೆರೆಹೊರೆ ಮತ್ತು ಭಾರತಕ್ಕಿಂತ ಉತ್ತಮವಾದ ದೇಶ ಸಿಗಲು ಸಾಧ್ಯವಿಲ್ಲ ಎಂದು ಅವರು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸದ್ಯ ಯೂರೋಪ್‌ ಮತ್ತು ಮುಸ್ಲೀಂ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಹೇಗಿದೆ? ಎಲ್ಲೆಡೆ ಅಸಹಿಷ್ಣುತೆ ಇದೆ. ಮುಸ್ಲೀಮರಿಗೆ ಭಾರತವೇ ಹೆಚ್ಚು ಸುರಕ್ಷಿತ, ಜಾತ್ಯತೀತ ದೇಶ. ಇಲ್ಲಿ ಮುಸ್ಲೀಮರು ಕೂಡ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಈ ದೇಶದಲ್ಲಿ ಒಬ್ಬ ಕಲಾವಿದ ತನ್ನ ಕಲೆಯಿಂದಲೇ ಗುರುತಿಸಿಕೊಳ್ಳುತ್ತಾನೆಯೇ ಹೊರತು, ಆತನ ಜಾತಿ, ಧರ್ಮದಿಂದಲ್ಲ ಎಂದು ಹುಸೇನ್‌  ಹೇಳಿದರು.

‘ಈ ದೇಶವು (ಭಾರತ) ನಿಮಗೆ ಹೆಸರು, ಗೌರವ, ಸಂಪತ್ತು ತಂದುಕೊಟ್ಟಿದೆ. ಇದು ಪ್ರತಿಯೊಬ್ಬ ಭಾರತೀಯರ ಪ್ರೀತಿಯಿಂದ ಲಭಿಸಿದೆ. ನೀವು ಸೆಲೆಬ್ರಿಟಿ ಆಗಿರುವುದರಿಂದ ನಿಮ್ಮ ಹೇಳಿಕೆಗಳು ದಿನ ಪತ್ರಿಕೆಯಲ್ಲಿ ದೊಡ್ಡ ಶೀರ್ಷಿಕೆಯಲ್ಲಿ ಪ್ರಕಟಗೊಳ್ಳುತ್ತವೆ, ವಾಹಿನಿಗಳಲ್ಲಿ ಒಳ್ಳೆಯ ಪ್ರಚಾರ ಲಭಿಸುತ್ತದೆ. ಆದರೆ, ಇವೆಲ್ಲವೂ ದೇಶಕ್ಕೆ ಅಪಖ್ಯಾತಿ ತರಲು ಶತ್ರುಗಳು ಮಾಡುತ್ತಿರುವ ಒಳಸಂಚು ಎನ್ನುವುದನ್ನು ನೀವು ನೆನಪಿನಲ್ಲಿಡಬೇಕು’ ಎಂದು ಶಹನವಾಜ್‌ ಹೇಳಿದ್ದಾರೆ.

ಬಿಜೆಪಿ ಜನಪ್ರಿಯತೆ ಸಹಿದ ಕಾಂಗ್ರೆಸ್‌ ಅಹಿಷ್ಣುತೆ ಮುಂದಿಟ್ಟುಕೊಂಡು ದೇಶಕ್ಕೆ ಅಪಖ್ಯಾತಿ ತರುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT