ADVERTISEMENT

ಮೃತಪಟ್ಟ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಹಸಿದ ಕಂದ: ಮನಕಲಕುವ ದೃಶ್ಯ ವೈರಲ್‌

ಏಜೆನ್ಸೀಸ್
Published 25 ಮೇ 2017, 11:23 IST
Last Updated 25 ಮೇ 2017, 11:23 IST
ಚಿತ್ರ: ಟ್ವಿಟರ್‌ dbpostnews
ಚಿತ್ರ: ಟ್ವಿಟರ್‌ dbpostnews   

ಭೋಪಾಲ್‌: ಹಸಿವಿನಿಂದ ಬಳಲಿದ್ದ ಒಂದು ವರ್ಷದ ಮಗು ರೈಲ್ವೆ ಹಳಿ ಬದಿ ಸತ್ತು ಬಿದ್ದಿದ್ದ ತನ್ನ ತಾಯಿಯ ಎದೆ ಹಾಲು ಕುಡಿಯಲು ಯತ್ನಿಸುತ್ತಿದ್ದ ಮನಕಲಕುವ ದೃಶ್ಯದ ಚಿತ್ರ ಮಧ್ಯಪ್ರದೇಶದಲ್ಲಿ ಸರೆಯಾಗಿದ್ದು, ಇದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 250 ಕಿ.ಮೀ. ದೂರದ ದಾಮೋಹಿಯಲ್ಲಿ ರೈಲು ಹಳಿ ಪಕ್ಕ ಬುಧವಾರ ಮಹಿಳೆಯ ಶವ ಪತ್ತೆಯಾಗಿದೆ. ಒಂದು ವರ್ಷದ ಪುಟ್ಟ ಕಂದ ತಾಯಿಯ ಕಳೆಬರದ ಎದೆಯಿಂದ ಹಾಲು ಕುಡಿಯಲು ಯತ್ನಿಸುತ್ತಿದ್ದ ದೃಶ್ಯ ಸೆರೆಯಾಗಿದೆ.

ಸ್ಥಳಕ್ಕೆ ಆಗಮಿಸಿದ ಪೋಲೀಸರು ಮತ್ತು ಅಧಿಕಾರಿಗಳು ಮಗು ಹಸಿವಿನಿಂದ ತಾಯಿಯ ಎದೆಗೊರಗಿ ಹಾಲು ಕುಡಿಯಲು ಯತ್ನಿಸುತ್ತಿರುವುದನ್ನು ಕಂಡಿದ್ದಾರೆ. ಬಳಿಕ, ಮಗುವನ್ನು ಅಲ್ಲಿಂದ ಎತ್ತಿಕೊಂಡು ಮಗುವಿಗೆ ತಿನ್ನಲು ಬಿಸ್ಕತ್ತು ನೀಡಿದ್ದಾರೆ.

ADVERTISEMENT

ಸ್ಥಳದಲ್ಲಿದ್ದ ಹಲವರು ಈ ದೃಶ್ಯದ ವಿಡಿಯೊ ಮತ್ತು ಚಿತ್ರಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ. ಈ ಕುರಿತು ಎನ್‌ಡಿ ಟಿ.ವಿ ವರದಿ ಮಾಡಿದೆ.

ಮಹಿಳೆ ರೈಲಿನಿಂದ ಬಿದ್ದಿದ್ದಾರೆ ಅಥವಾ ಚಲಿಸುವ ರೈಲಿಗೆ ಸಿಕ್ಕಿದ್ದಾರೆ. ಇದರಿಂದ ಅವರ ತಲೆಗೆ ಪೆಟ್ಟಾಗಿದೆ. ತಾಯಿ ಸಾಯುವ ಮುನ್ನ ಪ್ರಜ್ಞಾಸ್ಥಿತಿಯಲ್ಲಿದ್ದಾಗ ಮಗುವಿಗೆ ಹಾಲುಣಿಸಲು ಯತ್ನಿಸಿ ಸಾವೀಗೀಡಾಗಿರಬಹುದು. ಮಗು ಹಾಲು ಕುಡಿಯಲು ಹಾಗೂ ತಾಯಿಯನ್ನು ಎಚ್ಚರಿಸಲು ಯತ್ನಿಸಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮತ್ತು ಅಧಿಕಾರಿಗಳು ಮಗುವನ್ನು ತಾಯಿಯಿಂದ ದೂರಕ್ಕೆ ಕರೆತಂದಾಗ ಆ ಮಗುವಿನ ಗೋಳಾಟ ಎಲ್ಲರ ಮನಕಲಕಿದೆ.

ಮಗುವನ್ನು ಶಿಶು ಪಾಲನಾ ಕೇಂದ್ರದಲ್ಲಿ ಇರಿಸಲಾಗಿದ್ದು, ಕುಟುಂಬದ ಸದಸ್ಯರು ಅಥವಾ ಸಂಬಂಧಿಗಳ ಹುಡುಕಾಟದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ತೊಡಗಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಪರ್ಸ್‌ ಲಭಿಸಿದ್ದು, ಸಂಬಂಧಿಗಳ ಹುಡುಕಾಟಕ್ಕೆ ಸುಳಿವು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

‘ಮಗು ನಮ್ಮ ಬಳಿಗೆ ಬಂದಾಗ ಅಶಕ್ತವಾಗಿತ್ತು. ನಿರಂತರವಾಗಿ ಅಳುತ್ತಿತ್ತು. ತಾಯಿಯನ್ನು ಕಳೆದುಕೊಂಡಿದ್ದ ಮಗುವನ್ನು ಸಮಾಧಾನ ಪಡಿಸುವುದು ಬಹಳ ಕಷ್ಟವಾಯಿತು. ಮಗು ನಿನ್ನೆಗಿಂತ ಇಂದು ಸ್ವಲ್ಪ ಉತ್ತಮವಾಗಿದೆ. ಗುರುತಿಸುತ್ತದೆ ಮತ್ತು ಚೆನ್ನಾಗಿ ತಿನ್ನುತ್ತಿದೆ’ ಎಂದು ಶಿಶು ಆರೈಕೆ ಕಾರ್ಯಕರ್ತೆ ಸರಿತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.