ADVERTISEMENT

ಮೆಟ್ರೊದಲ್ಲಿ ಸ್ಟಾಲಿನ್‌ ಕಪಾಳ ಮೋಕ್ಷ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಚೆನ್ನೈ (ಪಿಟಿಐ): ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಅವರು ಇಲ್ಲಿನ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಹಪ್ರಯಾಣಿಕರೊಬ್ಬರ ಕಪಾಳಕ್ಕೆ ಹೊಡೆದ ಘಟನೆ ಬುಧವಾರ ನಡೆದಿದೆ.

ಈ ಘಟನೆಯನ್ನು ಎಐಎಡಿಎಂಕೆ ನಾಯಕಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ತೀವ್ರವಾಗಿ ಖಂಡಿಸಿದ್ದಾರೆ. ಡಿಎಂಡಿಕೆ ನಾಯಕ ವಿಜಯಕಾಂತ್‌ ಜೊತೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸ್ಟಾಲಿನ್‌, ಪಕ್ಕಕ್ಕೆ ನಿಂತಿದ್ದ ಸಹಪ್ರಯಾಣಿಕರೊಬ್ಬರ ಕಪಾಳಕ್ಕೆ ಹೊಡೆದು, ಹಿಂದೆ ಹೋಗುವಂತೆ ಹೇಳುತ್ತಿರುವುದು ವಿಡಿಯೊದಲ್ಲಿ ಚಿತ್ರೀಕರಣಗೊಂಡಿದೆ.

‘ನಾನು ಸಹಪ್ರಯಾಣಿಕನಿಗೆ ಹೊಡೆದಿಲ್ಲ. ಪಕ್ಕದ ಸೀಟಿನಲ್ಲಿ ಮಹಿಳೆಯೊಬ್ಬರು ಕುಳಿತಿದ್ದರು. ಅವರ ಕಾಲಿಗೆ ಈ ಪ್ರಯಾಣಿಕನ ಕಾಲು ತಾಗುತ್ತಿತ್ತು. ಅದಕ್ಕಾಗಿ ಹಿಂದೆ ಹೋಗುವಂತೆ ಕೈಸನ್ನೆ ಮೂಲಕ ಆತನಿಗೆ ಹೇಳಿದ್ದೇನೆ. ಈ ಸಂದರ್ಭದಲ್ಲಿ ಆತನ ಕಪಾಳಿಗೆ ನನ್ನ ಕೈ ತಾಗಿದೆ ಅಷ್ಟೆ’ ಎಂದು ಸ್ಟಾಲಿನ್‌ ಹೇಳಿದ್ದಾರೆ.

‘ರಾಜಕೀಯ ಲಾಭಕ್ಕಾಗಿ ಸ್ಟಾಲಿನ್‌ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಸಹಪ್ರಯಾಣಿಕರ ಮೇಲೆ ಹಲ್ಲೆ ನಡೆಸುವುದು ಅನಾಗರಿಕ ವರ್ತನೆಯಾಗಿದೆ. ಇದು ಖಂಡನೀಯ’ ಎಂದು ಜಯಾ ಟೀಕಿಸಿದ್ದಾರೆ.

ಡಿಎಂಕೆ ಅಧಿಕಾರದ ಅವಧಿಯಲ್ಲಿ ಚೆನ್ನೈ ಮೆಟ್ರೊ ಯೋಜನೆಗೆ ಚಾಲನೆ ನಿಡಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಎಐಎಡಿಎಂಕೆ ಸರ್ಕಾರ ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡಿತು ಎಂದು ಸ್ಟಾಲಿನ್‌ ಹಾಗೂ ವಿಜಯಕಾಂತ್‌ ಆರೋಪಿಸಿದ್ದಾರೆ.

ಆದರೆ, ಜಯಲಲಿತಾ ಅವರು ಈ ಹೇಳಿಕೆಯನ್ನು ನಿರಾಕರಿಸಿದ್ದು, ಡಿಎಂಕೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕೇವಲ ಶೇ 3ರಷ್ಟು ಕೆಲಸ ಮಾತ್ರ ಆಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಶೇ 73ರಷ್ಟು ಕೆಲಸ ಆಗಿದೆ ಎಂದು  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.