ADVERTISEMENT

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2014, 19:34 IST
Last Updated 18 ನವೆಂಬರ್ 2014, 19:34 IST

ನವದೆಹಲಿ: ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡವಾಗಿ ಎರಡು ಅಣೆಕಟ್ಟೆಗಳನ್ನು ನಿರ್ಮಿಸಿ, ವಿದ್ಯುತ್‌ ಉತ್ಪಾದಿಸುವ ಕರ್ನಾಟಕದ ಯೋಜ­ನೆಗೆ ಅವಕಾಶ ಕೊಡಬಾರದು ಎಂದು ತಮಿಳುನಾಡು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕರ್ನಾಟಕ ಮೇಕೆದಾಟು ಬಳಿ ಜಲ ವಿದ್ಯುತ್‌ ಉತ್ಪಾದನೆಗೆ ಅಣೆಕಟ್ಟೆ­ಗ­ಳನ್ನು ಕಟ್ಟುವುದರಿಂದ ತಮಿಳು­ನಾಡಿಗೆ ನೀರು ಸರಾಗವಾಗಿ ಹರಿಯದೆ, ಲಕ್ಷಾಂತರ ರೈತರಿಗೆ ತೊಂದರೆ ಆಗಲಿದೆ ಎಂದು ತಮಿಳುನಾಡು ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಿದೆ.

ಕುಡಿಯುವ ನೀರಿನ ಯೋಜನೆಗಳ ನೆಪದಲ್ಲಿ ಕರ್ನಾಟಕ ಜಲ ವಿದ್ಯುತ್‌ ಘಟಕಗಳನ್ನು ನಿರ್ಮಿಸಲು ಉದ್ದೇಶಿ­ಸಿದೆ. ಯೋಜನೆ ತಾಂತ್ರಿಕ ಅಧ್ಯಯನಕ್ಕೆ ಜಾಗತಿಕ ಟೆಂಡರ್‌ ಕರೆಯಲಾಗಿದೆ. ಈ ಸಂಬಂಧ ಹೊರಡಿಸಿರುವ ನೋಟಿಸ್‌ ಹಿಂದಕ್ಕೆ ಪಡೆಯುವಂತೆ ನೆರೆಯ ರಾಜ್ಯಕ್ಕೆ ಸೂಚಿಸುವಂತೆ ತಮಿಳುನಾಡು ಅರ್ಜಿಯಲ್ಲಿ ಕೇಳಿದೆ.

ಕರ್ನಾಟಕದ ಉದ್ದೇಶಿತ ಜಲ ವಿದ್ಯುತ್‌ ಯೋಜನೆಯಿಂದ 2,500 ಎಕರೆ ಅರಣ್ಯ ಭೂಮಿ ಮುಳುಗಡೆ ಆಗಲಿದೆ. ನದಿ ಕೆಳಗಿನ ರಾಜ್ಯವಾದ ತಮಿಳುನಾಡು ಹಕ್ಕುಗಳಿಗೆ ಧಕ್ಕೆ ಆಗಲಿದೆ. ಅಲ್ಲದೆ, ಕಾವೇರಿ ನ್ಯಾಯ­ಮಂಡಳಿ 2007ರ ಫೆಬ್ರುವರಿ 5ರಂದು ನೀಡಿರುವ ಐತೀರ್ಪಿನ ಉಲ್ಲಂಘನೆ ಆಗಲಿದೆ. ಕೇಂದ್ರ ಸರ್ಕಾರ 2013ರ ಫೆಬ್ರುವರಿ 19ರಂದು ಐತೀರ್ಪಿನ ಅಧಿಸೂಚನೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ವಿವರಿಸಿದೆ.

ಕಾವೇರಿ ನೀರು ಹಂಚಿಕೆ ಮೇಲ್ವಿ­ಚಾರಣೆಗೆ ‘ಕಾವೇರಿ ನಿರ್ವಹಣಾ ಮಂಡಳಿ’ ರಚಿಸುವಂತೆ ಕೇಂದ್ರಕ್ಕೆ ಸೂಚಿ­ಸು­ವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಶಿವನ­ಸಮುದ್ರ, ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಿಸುವುದನ್ನು ತಡೆಯುವಂತೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳೂ ಈ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಉಳಿದಿದೆ ಎಂದೂ ತಮಿಳುನಾಡು ಉಲ್ಲೇಖಿಸಿದೆ.

ಕರ್ನಾಟಕ ಜಲ ವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳುವುದನ್ನು ತಡೆಯುವಂತೆ ಮನವಿ ಮಾಡಿ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದರೂ ಪ್ರಯೋಜನ ವಾಗಿಲ್ಲ. ಯೋಜನೆ ಮುಂದುವರಿಸಬಾರದೆಂದು ಕೇಂದ್ರ ಸರ್ಕಾರವಾಗಲೀ ಅಥವಾ ಪ್ರಧಾನಿ ಕಚೇರಿಯಾಗಲೀ ಕರ್ನಾಟಕಕ್ಕೆ ಸೂಚಿಸಿಲ್ಲ ಎಂದು ತಮಿಳು ನಾಡು ಅರ್ಜಿಯಲ್ಲಿ ದೂರಿದೆ.

ತಮಿಳುನಾಡು ಮುಖ್ಯಮಂತ್ರಿ ನವೆಂಬರ್‌ 12ರಂದು ಕೇಂದ್ರಕ್ಕೆ ಮತ್ತು ಕರ್ನಾಟಕಕ್ಕೆ ಪತ್ರ ಬರೆದಿದ್ದು, ಕಾವೇರಿ ವಿವಾದಕ್ಕೆ ಸಂಬಂಧಪಟ್ಟ ರಾಜ್ಯಗಳ ಒಪ್ಪಿಗೆ ಪಡೆಯದೆ ಯಾವುದೇ ವಿದ್ಯುತ್‌ ಅಥವಾ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದೆಂದು ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿ ಸಿದ್ದಾರೆಂದೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಶಿವನಸಮುದ್ರ ಮತ್ತು ಹೊಗೇನಕಲ್‌ ಮಧ್ಯೆ ಶಿವನಸಮುದ್ರ (270ಮೆ.ವಾ) ಮೇಕೆದಾಟು (400ಮೆ.ವಾ), ರಾಸಿ­ಮನಾಲ್‌ (360ಮೆ.ವಾ) ಮತ್ತು ಹೊಗೇನಕಲ್‌ (120 ಮೆ.ವಾ) ಯೋಜ­ನೆ­ಗಳನ್ನು ಕೈಗೆತ್ತಿಕೊಳ್ಳಲು ಗುರುತಿ­ಸಲಾಗಿದೆ. ಮೊದಲೆರಡು ಯೋಜನೆಗಳು ಕರ್ನಾಟಕದೊಳಗೆ ಬರಲಿವೆ. ಕೊನೆಯ ಎರಡು ಯೋಜನೆಗಳು ಕರ್ನಾಟಕ ಮತ್ತು ತಮಿಳುನಾಡು ನಡುವೆ ತಲೆಎತ್ತಲಿವೆ.

ಜಲ ವಿದ್ಯುತ್‌ ಯೋಜನೆಗಳು ನ್ಯಾಯಮಂಡಳಿ ಷರತ್ತುಗಳಿಗೆ ಒಳ­ಪಟ್ಟಿದ್ದು, ಅವುಗಳನ್ನು ಪೂರೈಸಬೇಕಾದ ಹೊಣೆ ಸಂಬಂಧಪಟ್ಟ ರಾಜ್ಯಗಳ ಮೇಲಿದೆ ಎಂದು ಅರ್ಜಿಯಲ್ಲಿ  ಪ್ರತಿಪಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT