ADVERTISEMENT

ಮೇಲ್ಮನವಿ ಪುರಸ್ಕರಿಸಿದ ‘ಸುಪ್ರೀಂ’

ಅದಿರು ಉತ್ಪಾದನೆ ಮಿತಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ನವದೆಹಲಿ: ಅದಿರು ಉತ್ಪಾದನೆಯ ಮಿತಿಯನ್ನು ಹೆಚ್ಚಿಸುವಂತೆ ಉಕ್ಕು ಉತ್ಪಾದಕರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಮಂಗಳವಾರ ಒಪ್ಪಿಗೆ  ಸೂಚಿಸಿದ ಸುಪ್ರೀಂ ಕೋರ್ಟ್‌, ಅದಿರಿನ ಇ–ಹರಾಜು ಪ್ರಕ್ರಿಯೆಯ ಪರ್ಯಾಯ ವ್ಯವಸ್ಥೆ ಕುರಿತು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ‘ಎ’, ‘ಬಿ’ ಮತ್ತು ‘ಸಿ’ ಕೆಟಗೆರಿ ಗಣಿಗಳಲ್ಲಿ, ಈಗ ನಿಗದಿಗೊಳಿಸಿರುವ ವಾರ್ಷಿಕ 30 ದಶಲಕ್ಷ ಮೆಟ್ರಿಕ್‌ ಟನ್‌ ಅದಿರು ಉತ್ಪಾದನೆಯ ಮಿತಿಯನ್ನು 40 ದಶಲಕ್ಷ ಟನ್‌ಗೆ ಹೆಚ್ಚಿಸುವಂತೆ ಉಕ್ಕು ಉತ್ಪಾದನಾ ಘಟಕಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್‌ ಗೋಗೊಯ್‌ ನೇತೃತ್ವದ ತ್ರಿಸದಸ್ಯ ಪೀಠವು, ಸರ್ಕಾರಿ ಒಡೆತನದ ಗಣಿಗಳಲ್ಲಿ ಅದಿರು ಉತ್ಪಾದನೆ ಹೆಚ್ಚಿಸುವುದಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಿರಾಕರಿಸಿತು.

ಅದಿರಿನ ಇ– ಹರಾಜು ವ್ಯವಸ್ಥೆಯನ್ನೇ ಕೈಬಿಡುವಂತೆ ಕೋರಿ ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್‌ ಇಂಡಸ್ಟ್ರೀಸ್‌ (ಫಿಮಿ) ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲೆ ಅನಿತಾ ಶೆಣೈ ಅವರಿಗೆ ಸೂಚಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.