ADVERTISEMENT

ಮೋದಿ ಆಹ್ವಾನ ಮನ್ನಿಸಿದ ಗಣ್ಯರು

​ಪ್ರಜಾವಾಣಿ ವಾರ್ತೆ
Published 22 ಮೇ 2014, 13:38 IST
Last Updated 22 ಮೇ 2014, 13:38 IST

ನವದೆಹಲಿ (ಐಎಎನ್‍ಎಸ್): ತಮ್ಮ ಪ್ರಧಾನಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವಂತೆ ಕೋರಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ನಾಯಕರಿಗೆ ಕಳುಹಿಸಿದ ಆಹ್ವಾನಕ್ಕೆ ಹಲವು ಮುಖಂಡರಿಂದ ಹೃರ್ತ್ಪೂವಕ ಪ್ರತಿಕ್ರಿಯೆ ದೊರೆತಿದೆ. ಆದರೆ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಮೋದಿ ಅವರ ಆಹ್ವಾನ ಕುರಿತಂತೆ ಇನ್ನೂ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಆಫ್ಘನ್‍, ಮಾಲ್ಡೀವ್ಸ್, ಶ್ರೀಲಂಕಾದ ಅಧ್ಯಕ್ಷರು ಮತ್ತು ನೇಪಾಳದ ಪ್ರಧಾನಿ ಅವರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ. ಬಾಂಗ್ಲಾದೇಶದ ಸಂಸತ್ತಿನ ಸಭಾಪತಿಗಳು ಹಾಜರಾಗಲಿದ್ದಾರೆ.

ಜತೆಗೆ, ಸಾರ್ಕ್ ನಾಯಕರ ಹೊರತಾಗಿ ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮ್‌ಗೂಲಂ ಅವರು ಕೂಡ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ಧಿನ್ ಅವರು ಸರಣಿ ಟ್ವೀಟ್ ನಲ್ಲಿ ಅಪ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಎಮ್ಮಿನ್ ಅಬ್ದುಲ್ ಗಯೂಮ್, ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷ ಮತ್ತು ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅವರು ಸಮಾರಂಭದಲ್ಲಿ ಭಾಗವಹಿಸುವುದಾಗಿ ದೃಢೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಮೋದಿ ಅವರು ಸಾರ್ಕ್‌ನ ಮುಖಂಡರಾಗಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಅಪ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ, ಭೂತಾನ್ ಪ್ರಧಾನಿ ತ್ಸೆರಿಂಗ್ ತೊಬ್ಗೆ, ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಮತ್ತು ಮಾಲ್ಡೀವ್ ಅಧ್ಯಕ್ಷ ಅಬ್ದುಲ್ಲಾ ಎಮ್ಮಿನ್ ಅಬ್ದುಲ್ ಗಯೂಮ್ ಅವರನ್ನು ಆಹ್ವಾನಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.