ADVERTISEMENT

ಮೋದಿ ನಾಮಪತ್ರ ಸಲ್ಲಿಕೆ: ರೋಡ್ ಶೋಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 9:11 IST
Last Updated 24 ಏಪ್ರಿಲ್ 2014, 9:11 IST

ವಾರಾಣಸಿ(ಪಿಟಿಐ, ಐಎಎನ್ಎಸ್): ಈ ಬಾರಿಯ ಲೋಕಸಭಾ ಚುನಾವಣೆ ಕುತೂಹಲದ ಕೇಂದ್ರ ಎನಿಸಿರುವ ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಗುರುವಾರ ಸಹಸ್ರಾರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಕಣಕ್ಕಿಳಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಸಿದ ರೋಡ್ ಶೋಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು.

ಪಕ್ಷದ ಮುಖಂಡರೊಂದಿಗೆ ನಗರದ ಪ್ರಮುಖ ಸ್ಥಳಗಳಲ್ಲಿ ಮೋದಿ ರೋಡ್ ಶೋ ನಡೆಸುತ್ತಿದ್ದಂತೆ ನೆರೆದಿದ್ದ ಜನ ಮೋದಿ ಪರ ಘೋಷಣೆ ಕೂಗಿ, ಕೇಸರಿ ಧ್ವಜ ಬೀಸಿ ಬೆಂಬಲ ವ್ಯಕ್ತಪಡಿಸಿದರು.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣಕ್ಕೆ ತೆರಳಿದ ಮೋದಿ, ಮದನ್ ಮೋಹನ ಮಾಳವಿಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಲ್ಲಿಂದಲೇ ಬೆಂಬಲಿಗರಿಗೆ ಕೈಮುಗಿದ ಮೋದಿ, ರೋಡ್ ಶೋ ಮುಂದುವರಿಸಿದರು.

ಮನೆಗಳ ಚಾವಣಿ, ಕಟ್ಟಡಗಳ ಮೇಲೆಲ್ಲ ಜಮಾಯಿಸಿದ್ದ ಅಭಿಮಾನಿಗಳು ರೋಡ್ ಶೋ ಮೂಲಕ ತೆರಳಿದ ಮೋದಿಗೆ ಅಲ್ಲಿಂದಲೇ ಶುಭ ಕೋರಿದರು. ನಾಮಪತ್ರ ಸಲ್ಲಿಸಲು ಮೋದಿ ಜಿಲ್ಲಾಧಿಕಾರಿ ಕಚೇರಿ ತಲುಪುವ ಪೂರ್ವದಲ್ಲಿ ಎರಡು ಕಿ.ಮೀ. ರೋಡ್ ಶೋ ಕೈಗೊಂಡಿದ್ದಾರೆ.

ಪಂಜಾಬ್, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳ ಸಾಂಪ್ರದಾಯಿಕ ಉಡುಪು ಧರಿಸಿ ಬೆಂಬಲಿಗರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT