ADVERTISEMENT

ಮೋದಿ ಪ್ರಧಾನಿಯಾದರೂ ದೇಶ ತೊರೆಯಲಾರೆ

ಭಾವೋದ್ವೇಗದ ಹೇಳಿಕೆ: ಲೇಖಕ ಅನಂತಮೂರ್ತಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ‘ನರೇಂದ್ರ ಮೋದಿ ಪ್ರಧಾನಿ­ಯಾದರೆ ದೇಶ ತೊರೆಯುವುದಾಗಿ  ಭಾವೋದ್ವೇಗಕ್ಕೆ ಒಳಗಾಗಿ ಹೇಳಿಕೆ ನೀಡಿದ್ದೆ. ಆದರೆ ರಾಷ್ಟ್ರ ತೊರೆಯು­ವಂತಹ ಯಾವುದೇ ಯೋಚನೆ ಇಲ್ಲ’ ಎಂದು ಲೇಖಕ ಅನಂತಮೂರ್ತಿ ಹೇಳಿದ್ದಾರೆ.

ಆದರೆ ಬಿಜೆಪಿಯನ್ನು ವಿರೋಧಿಸುವ ತಮ್ಮ ನಿಲು­ವನ್ನು ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿ­ದ್ದಾರೆ. ಏಕ ಸಂಸ್ಕೃತಿಯನ್ನು ಹೇರುವ ಬಲಿಷ್ಠ ಸರ್ಕಾರ­ಕ್ಕಿಂತ ವೈವಿಧ್ಯಮಯ ಬೇಡಿಕೆ­ಗಳಿಗೆ ಗಮನ ನೀಡು­ವಂತಹ ‘ಸಹಿಷ್ಣು ಸರ್ಕಾರ’­ವನ್ನು ತಾವು ಬೆಂಬಲಿಸು­ವುದಾಗಿ ಅವರು­ತಿಳಿಸಿದ್ದಾರೆ.

‘ಮೋದಿ ಪ್ರಧಾನಿಯಾದರೆ ರಾಷ್ಟ್ರ ತೊರೆ­ಯು­ವು­ದಾಗಿ ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಸಭೆ­ಯೊಂದರಲ್ಲಿ ಹೇಳಿದ್ದೆ. ಆದರೆ ಭಾರತವನ್ನು ಬಿಟ್ಟು ಬೇರೆಲ್ಲಿಗಾದರೂ ಹೋಗಲು ನನಗೆ ಸಾಧ್ಯವಾಗದು’ ಎಂದು ಯೋಜನಾ ಆಯೋಗದ ಸದಸ್ಯ ಸಯೇದಾ ಹಮೀದ್‌ ಮತ್ತು ಸಾಹಿತಿ ಅಶೋಕ್‌ ವಾಜ­ಪೇಯಿ ಅವರ ಸಮ್ಮುಖದಲ್ಲಿ ಹೇಳಿದರು.

‘ಮೋದಿ ಅವರು ಪ್ರಧಾನಿಯಾದರೆ ನಮ್ಮ ನಾಗರಿಕತೆಯೇ ಸ್ಥಿತ್ಯಂತರವಾಗಬಹುದು. ಯಾವಾಗ ಬೆದರಿಕೆ ಎಂಬುದು ಇರುತ್ತದೋ ಆಗ ನಮ್ಮ ಪ್ರಜಾ­ತಾಂತ್ರಿಕ ಹಕ್ಕು­ಗಳು ಅಥವಾ ನಾಗರಿಕ ಹಕ್ಕು­ಗ­ಳನ್ನು ನಿಧಾನವಾಗಿ ಕಳೆ­ದು­ಕೊ­ಳ್ಳು­ತ್ತೇವೆ ಎಂಬುದು ನನ್ನ ಅನಿ­ಸಿಕೆ. ಅದಕ್ಕಿಂತ ಹೆಚ್ಚಾಗಿ ಬೆದ­ರಿಕೆ ಎಂಬುದು ಇದ್ದಾಗ ನಾವು­ಗಳು ಹೇಡಿ­ಗಳಾಗುತ್ತೇವೆ’ ಎಂದರು.

ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಪೂರಕ­ವಾದ ಸನ್ನಿವೇಶವನ್ನು ನಿರ್ಮಿಸಲಾ­ಗು­ತ್ತಿದ್ದು, ಮಾಧ್ಯ­ಮ­ಗಳು ಹಾಗೂ ಸುಧಾರಣಾ­ವಾದಿಗಳ ಬೆಂಬಲವೂ ಇದಕ್ಕಿದೆ ಎಂದರು.

‘ಮೋದಿ ಅವರು ಪ್ರಧಾನಿಯಾದರೆ ಹಿಂಸಾ­ತ್ಮಕ ಘಟನೆಗಳು ಹಾಗೂ ಹತ್ಯಾ­ಕಾಂಡಗಳು ಹೆಚ್ಚಬಹು­ದೆಂಬ ಮೂಲಭೂತ ಭಯ ನನ್ನನ್ನು ಕಾಡುತ್ತಿದೆ. ಇದೇ ವೇಳೆ, ನಿಧಾನವಾಗಿ ಭಾರತದ ಸ್ವರೂಪವೇ ಸಂಪೂರ್ಣವಾಗಿ ಬದ­ಲಾಗಿ­ಬಿಡುವ ಸಾಧ್ಯತೆಯೂ ಇದೆ. ಹೀಗಾದರೆ ರಕ್ತಪಾತಕ್ಕಿಂತ ಹೀನಾಯ ಸ್ಥಿತಿ ನಿರ್ಮಾಣ­ವಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಗುಲ್ಬರ್ಗ ಕೇಂದ್ರೀಯ ವಿ.ವಿ.ಯ ಕುಲಪತಿ­ಯಾಗಿ ನಾನು ತಿಂಗಳಿಗೆ 1 ಲಕ್ಷ ರೂಪಾಯಿ ವೇತನ ಪಡೆಯು­ತ್ತಿದ್ದೇನೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿರುವ ನೀಡಿಕೆ­ಯಲ್ಲಿ ಸತ್ಯಾಂಶವಿಲ್ಲ’ ಎಂದು ಹೇಳಿದರು.

ರಾಜಕೀಯ ಪಕ್ಷಗಳು ‘ಅಭಿವೃದ್ಧಿ’ಗಿಂತ ‘ಸರ್ವೋದಯ’ವನ್ನು ತಮ್ಮ ಗುರಿಯಾಗಿಸಿಕೊಳ್ಳ­ಬೇಕು ಎಂದು ಅನಂತಮೂರ್ತಿ ಅಭಿಪ್ರಾಯ­ಪಟ್ಟರು.
‘ಮೋದಿ ಅವರನ್ನು ಸೋಲಿಸುವ ನಿಟ್ಟಿನಲ್ಲಿ ವಾರಾಣಸಿ­ಯಲ್ಲಿ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಪರ­ವಾಗಿ ನಾನು ನಿಲ್ಲುತ್ತೇನೆ’ ಎಂದರು.

ಕಾರ್ಪೊರೇಟ್‌ ಉದ್ಯಮಿಗಳು ಬಹಿರಂಗ­ವಾಗಿಯೇ ಒಂದು ಪಕ್ಷದ ಪರ ನಿಂತಿದ್ದಾರೆ ಎಂದು ಆರೋಪಿಸಿದ ಅಶೋಕ್‌ ವಾಜಪೇಯಿ ಅವರು, ಚುನಾವಣೆಗಾಗಿ ಖರ್ಚು ಮಾಡು­ತ್ತಿರುವ ಹಣದ ಮೂಲ ಯಾವುದು ಎಂದು ಕೇಳಿದರು. ಯೋಜನಾ ಆಯೋಗದ ಸದಸ್ಯ ಸಯೇದಾ ಹಮೀದ್‌ ಮಾತನಾಡಿ, ಅಭಿ­ವೃದ್ಧಿಯ ಕೆಲವು ಸೂಚಕಗಳನ್ನು ಗಮನಿಸಿದರೆ ಗುಜರಾತ್‌ ರಾಜ್ಯವು ಉಳಿದ ಹಲವು ರಾಜ್ಯಗಳಿಗಿಂತ ಹಿಂದುಳಿದಿದೆ ಎಂದರು.

ಮೋದಿ ಸಂಭಾವ್ಯ ಪ್ರಧಾನಿ– ಬುದ್ಧಿಜೀವಿಗಳ ಆತಂಕ
ನವದೆಹಲಿ (ಪಿಟಿಐ): ಗುಜರಾತ್‌ನಲ್ಲಿ 2002ರಲ್ಲಿ ನಡೆದ ಮುಸ್ಲಿಮರ ನರಮೇಧದಲ್ಲಿ ಕಳಂಕಿತರಾಗಿರುವ ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಸಂಭಾವ್ಯತೆ ಬಗ್ಗೆ ರಾಷ್ಟ್ರದ 100ಕ್ಕೂ ಹೆಚ್ಚು ಬುದ್ಧಿಜೀವಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನಲ್ಲಿ ನಡೆದ ಅಮಾನುಷ ಕೋಮುಗಲಭೆಗಳನ್ನು ಕಡೆಗಣಿಸಿ ನರೇಂದ್ರ ಮೋದಿ ಅವರನ್ನು ‘ನಿಷ್ಠುರ ನಾಯಕ’ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಅನಂತಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಧ್ವನಿ ಎತ್ತಿದ್ದಾರೆ.

‘ರಾಷ್ಟ್ರಕ್ಕೆ ಈಗ ಮೋದಿ ಅವರ ನಾಯಕತ್ವದ ಅಗತ್ಯವಿದೆ’ ಎಂದು ಬಿಂಬಿಸುತ್ತಿರುವ ಕಾರ್ಪೊರೇಟ್‌ ಮಾಧ್ಯಮಗಳ ಸಮೂಹ ಸನ್ನಿಯು ಜನರನ್ನು ಆವರಿಸಿದೆ. ಆದರೆ ಒಂದೊಮ್ಮೆ ಮೋದಿ ಪ್ರಧಾನಿಯಾದರೆ ರಾಷ್ಟ್ರದಲ್ಲಿ ಮತಾಂಧತೆ ಹೆಚ್ಚಾಗಿ ಕೋಮು ಸಾಮರಸ್ಯಕ್ಕೆ ಭಂಗವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಸುಳ್ಳು ಅಂಕಿ ಅಂಶಗಳು, ಅರೆಬರೆ ಸತ್ಯಗಳನ್ನೇ ಮುಂದಿಟ್ಟುಕೊಂಡು ಗುಜರಾತ್‌ನ್ನು ರಾಷ್ಟ್ರದ ಮಾದರಿ ರಾಜ್ಯ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಬುದ್ಧಿಜೀವಿಗಳು ದೂರಿದ್ದಾರೆ.

ಮಧು ಪ್ರಸಾದ್‌, ಮಿಹಿರ್‌ ಪಾಂಡ್ಯ, ಕೆ.ಸಚ್ಚಿದಾನಂದನ್‌, ಎಸ್‌.ಇರ್ಫಾನ್‌ ಹಬೀಬ್‌, ಸಾನಿಯಾ ಹಷ್ಮಿ, ತನ್ವೀರ್‌ ಅಖ್ತರ್‌, ನೀಲಂ ಮಾನ್‌ಸಿಂಗ್‌, ರಝಾ ಹೈದರ್‌, ಮೃಣಾಲಿನಿ ಮುಖರ್ಜಿ, ಮೊಹ್ಸಿನ್‌ ಖಾನ್‌,  ಪ್ರಭಾತ್‌ ಪಟ್ನಾಯಕ್‌, ನಿಖಿಲ್‌ ಕುಮಾರ್‌, ರಮೇಶ್‌ ದೀಕ್ಷಿತ್‌, ಗೀತಾ ಕಪೂರ್‌, ಕೆ.ಅಶೋಕ್‌ ರಾವ್‌, ಜಾವೇದ್‌ ಅಖ್ತರ್‌ ಖಾನ್‌, ಡಿ.ಎನ್‌.ಝಾ, ಅನಿಲ್‌ ಕುಮಾರ್‌ ಸಿನ್ಹಾ, ಅನುರಾಧಾ ಕಪೂರ್‌, ಎಂ.ಕೆ.ರೈನಾ ಮತ್ತಿತರರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT