ADVERTISEMENT

ಮೋದಿ ಮುತ್ಸದ್ಧಿ ರಾಜಕಾರಣಿ: ಸುಷ್ಮಾ

ನೆರೆ ದೇಶಗಳ ಜತೆ ಇದೇ ರೀತಿಯ ಸಂಬಂಧ ಇರಬೇಕು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2015, 19:30 IST
Last Updated 25 ಡಿಸೆಂಬರ್ 2015, 19:30 IST

ನವದೆಹಲಿ (ಪಿಟಿಐ): ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಮುತ್ಸದ್ದಿ ರಾಜಕಾರಣಿ’ಯಂತೆ ವರ್ತಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಬಣ್ಣಿಸಿದ್ದಾರೆ.

‘ಮುತ್ಸದ್ದಿ ರಾಜಕಾರಣಿಗಳೆಂದರೆ ಹೀಗೆ ಇರುವರು. ನೆರೆ ದೇಶಗಳ ಜತೆ ಇದೇ ರೀತಿಯ ಸಂಬಂಧ ಇರಬೇಕು’ ಎಂದು ಅವರು ‘ಟ್ವೀಟ್‌’ ಮಾಡಿದ್ದಾರೆ

‘ರಾಜತಾಂತ್ರಿಕ  ಶಿಷ್ಟಾಚಾರವನ್ನು ಬದಿಗೊತ್ತಿ ಪಾಕ್‌ಗೆ ಭೇಟಿ ನೀಡಿದ ಮೋದಿ ಹೊಸ ಶಕೆಯ ಆರಂಭಕ್ಕೆ ನಾಂದಿ ಹಾಡಿದ್ದಾರೆ’ ಎಂದು ಬಿಜೆಪಿ ಹೇಳಿದೆ.

‘ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧ ಶಿಷ್ಟಾಚಾರದಿಂದ ಕೂಡಿತ್ತು. ಅದರಿಂದ ಹೊರಬರುವುದು ಅಗತ್ಯವಾಗಿತ್ತು. ಮೋದಿ ಆ ಕೆಲಸ ಮಾಡಿದ್ದಾರೆ. ಐರೋಪ್ಯ ಒಕ್ಕೂಟ ಮತ್ತು ಆಸಿಯಾನ್‌ ಒಳಗೊಂಡಂತೆ ವಿವಿಧ ದೇಶಗಳ ನಾಯಕರು ಇದೇ ಮಾದರಿಯನ್ನು ಅನುಸರಿಸುವರು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್‌ ಹೇಳಿದ್ದಾರೆ.

ಸೂಕ್ತ ನಡೆ– ಸಯೀದ್: ಪ್ರಧಾನಿ ಮೋದಿ ಅವರ ಪಾಕಿಸ್ತಾನ ಭೇಟಿಯು ಸರಿಯಾದ ದಿಕ್ಕಿನಲ್ಲಿ ಇಟ್ಟ ಸೂಕ್ತ ಹೆಜ್ಜೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಹೇಳಿದ್ದಾರೆ.

ಪರಿಸ್ಥಿತಿ ತಿಳಿಯಾಗಿದೆ–ಸಿಪಿಐ: ಪ್ರಧಾನಿ ಅವರ ಪಾಕ್‌ ಭೇಟಿಯನ್ನು ಸಿಪಿಐ ಸ್ವಾಗತಿಸಿದ್ದು, ‘ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸಲು ಹಲವು ಅಡೆತಡೆಗಳಿದ್ದವು. ಕೊನೆಗೂ ಪರಿಸ್ಥಿತಿ ತಿಳಿಯಾಗಿದೆ.  ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆಯ ಬೆನ್ನಲ್ಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪಾಕ್‌ಗೆ ಭೇಟಿ ನೀಡಿದ್ದರು. ಇದೀಗ ಮೋದಿ ಭೇಟಿ ನಡೆದಿದೆ’ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಪ್ರತಿಕ್ರಿಯಿಸಿದ್ದಾರೆ.

ಪಾತಕಿಗಳ ವಿರುದ್ಧ ಕ್ರಮಕ್ಕೆ  ನೆರವಾಗಲಿ (ಅಲಹಾಬಾದ್ ವರದಿ): ಗಡಿಯಾಚೆಗಿನ ಭಯೋತ್ಪಾದನೆ, ಪಾತಕಿಗಳಾದ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್ ಮತ್ತು ಲಖ್ವಿ ವಿರುದ್ಧ  ಕ್ರಮಕ್ಕೆ ಮೋದಿ ಅವರ ಪಾಕಿಸ್ತಾನ ಭೇಟಿ ನೆರವಾಗಬಹುದು ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.

ದಾವೂದ್ ವಾಪಸ್ ಕರೆತರಲಿ (ಮುಂಬೈ ವರದಿ): ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆ ತರುವಲ್ಲಿ ಯಶಸ್ವಿ ಆದರೆ ನಾವು ಪ್ರಧಾನಿ ಅವರ ಅಲ್ಪಕಾಲದ ಪಾಕಿಸ್ತಾನ ಭೇಟಿಯನ್ನು ಬೆಂಬಲಿಸುತ್ತೇವೆ ಎಂದು ಬಿಜೆಪಿಯ ಮಿತ್ರ ಪಕ್ಷವಾದ ಶಿವಸೇನಾ ಹೇಳಿದೆ.

ಪ್ರಧಾನಿ ದಿಟ್ಟ ಹೆಜ್ಜೆ: ಪಾಕಿಸ್ತಾನಕ್ಕೆ ಹಠಾತ್ ಭೇಟಿ ನೀಡುವ ಮೂಲಕ ಮೋದಿ ಉಭಯ ರಾಷ್ಟ್ರಗಳ ಮಧ್ಯೆ ಉತ್ತಮ ಸಂಬಂಧ ಸಾಧಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಆಬ್ಸರ್ವರ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.

ಸ್ವಾಗತಾರ್ಹ ಬೆಳವಣಿಗೆ–ಸಿಪಿಎಂ (ಕೋಲ್ಕತ್ತ ವರದಿ): ಪ್ರಧಾನಿ ನರೇಂದ್ರ ಮೋದಿ ಅವರು ಹಠಾತ್ತಾಗಿ ಪಾಕಿಸ್ತಾನಕ್ಕೆ ತೆರಳಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಿಪಿಎಂ ಹೇಳಿದೆ.

ಸಕಾರಾತ್ಮಕ ಬೆಳವಣಿಗೆ (ಶ್ರೀನಗರ ವರದಿ): ನರೇಂದ್ರ ಮೋದಿ ಅವರ ಪಾಕಿಸ್ತಾನ ಭೇಟಿಯು ಸ್ವಾಗತಾರ್ಹ ಮತ್ತು ಸಕಾರಾತ್ಮಕ ಬೆಳವಣಿಗೆ ಎಂದು ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್  (ಪ್ರಗತಿಪರ ಗುಂಪು) ಅಧ್ಯಕ್ಷ ಮಿರ್‌ವೈಜ್ ಉಮರ್ ಫಾರೂಕ್ ಹೇಳಿದ್ದಾರೆ.

ಮಾತುಕತೆ ನಿರಂತರ ನಡೆಯಲಿ: ಪ್ರಧಾನಿ ಮೋದಿ ಪಾಕ್‌ಗೆ ನೀಡಿರುವ ಸದ್ಭಾವನಾ ಭೇಟಿ ಉತ್ತಮ ನಡೆ. ಜತೆಗೆ ನಿರಂತರ ಮಾತುಕತೆ ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.

ನೆಚ್ಚಿನ ಖಾದ್ಯ (ಇಸ್ಲಾಮಾಬಾದ್‌ ವರದಿ): ಷರೀಫ್‌ ನಿವಾಸದಲ್ಲಿ ಮೋದಿ ಅವರಿಗೆ ನೆಚ್ಚಿನ ಖಾದ್ಯಗಳನ್ನು ಉಣ ಬಡಿಸಲಾಯಿತು. ‘ಸಾಗ್‌, ದಾಲ್ ಮತ್ತು ಇತರ ಸಸ್ಯಾಹಾರಿ ಆಹಾರ ಸೇರಿ ಹಲವು ವಿಧದ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಪ್ರಧಾನಿ ಅವರು ಕಾಶ್ಮೀರಿ ಚಹಾದ ರುಚಿಯನ್ನೂ ಸವಿದರು. ಜತಿ ಉಮ್ರಾದಲ್ಲಿರುವ ನಿವಾಸದಲ್ಲಿ ಷರೀಫ್‌ ಅವರ ಪುತ್ರ ಹಸನ್‌ ಮತ್ತು ಕುಟುಂಬದ ಇತರ ಸದಸ್ಯರು ಮೋದಿ ಅವರಿಗೆ ಅದ್ದೂರಿ ಸ್ವಾಗತ ನೀಡಿದರು.

ಕಾಲಿಗೆ ನಮಿಸಿದರು: ಇಬ್ಬರೂ ನಾಯಕರು ಮಾತನಾಡುತ್ತಿದ್ದಾಗ ಷರೀಫ್‌ ಅವರ ತಾಯಿ ಅಲ್ಲಿಗೆ ಬಂದರು. ಮೋದಿ ಅವರು ಷರೀಫ್‌ ತಾಯಿಯ ಕಾಲುಮುಟ್ಟಿ ನಮಸ್ಕರಿಸಿದರು ಎನ್ನಲಾಗಿದೆ.

ಉದ್ಯಮ ಹಿತಾಸಕ್ತಿ: ಕಾಂಗ್ರೆಸ್‌
ನವದೆಹಲಿ (ಪಿಟಿಐ):
ಎರಡೂ ರಾಷ್ಟ್ರಗಳ ಮಧ್ಯೆ ಉತ್ತಮ ಬಾಂಧವ್ಯ ಮೂಡಿಸಿ ದೇಶದ ಹಿತ ಕಾಪಾಡುವ ಉದ್ದೇಶದಿಂದ ಪ್ರಧಾನಿ ಮೋದಿ ಪಾಕ್‌ಗೆ ಭೇಟಿ ನೀಡಿಲ್ಲ, ಬದಲಿಗೆ ವೈಯಕ್ತಿಕ ವ್ಯವಹಾರಕ್ಕಾಗಿ ಅವರು ಅಲ್ಲಿಗೆ ಹೋಗಿದ್ದರು ಎಂದು ಕಾಂಗ್ರೆಸ್ ಟೀಕಿಸಿದೆ.

ಪ್ರಧಾನಿ ಅವರ ಅನಿರೀಕ್ಷಿತ ಪಾಕ್‌ ಭೇಟಿಯು ಅವಿವೇಕಿತನದ್ದು ಎಂದು ಟೀಕಿಸಿರುವ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ, ‘ ಮುಂಬೈ ದಾಳಿಯ ರೂವಾರಿ ಝಕಿಉರ್‌ ರೆಹಮಾನ್ ಲಖ್ವಿಯನ್ನು ಕರೆತರಲು ಮತ್ತು ಭಯೋತ್ಪಾದಕ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಪಾಕಿಸ್ತಾನದಿಂದ ಏನು ಭರವಸೆ ಸಿಕ್ಕಿದೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಅವರದು ಮುತ್ಸದ್ಧಿ ಎಂಬ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್, ಇದೊಂದು ‘ವ್ಯವಹಾರದ ಪ್ರವಾಸ’ ಎಂದು ಟೀಕಿಸಿದೆ. ಈ ಭೇಟಿಯಿಂದ ದೇಶಕ್ಕೆ ಪ್ರಯೋಜನ ಆಗದೆ ಇದ್ದರೆ ಮೋದಿ ಮುಖವಾಡ ಬಯಲಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ.

ಕಠ್ಮಂಡುವಿನಲ್ಲೂ ಮೋದಿ ಅವರು ಷರೀಫ್ ಅವರನ್ನು ಗೋಪ್ಯವಾಗಿ ಭೇಟಿ ಮಾಡಿ ವ್ಯವಹಾರದ ವಿಷಯ ಚರ್ಚಿಸಿದ್ದರು. ಈಗಲೂ ಅದೇ ವ್ಯವಹಾರದ  ಹಿತಾಸಕ್ತಿ ಇಟ್ಟುಕೊಂಡು ಷರೀಫ್ ಅವರನ್ನು ಭೇಟಿಯಾಗಿ ಗುಟ್ಟಾಗಿ ಮಾತುಕತೆ ನಡೆಸಿದ್ದಾರೆ ಎಂದು ಶರ್ಮಾ ಆರೋಪಿಸಿದರು.

ಇಬ್ಬರ ಮಧ್ಯೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉದ್ಯಮಿಯ ಹೆಸರನ್ನು ಮೋದಿ ಅವರು ತಾವಾಗಿಯೇ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರವಾಸಿ ಉದ್ದೇಶದ ಭೇಟಿ ಮಾಡುವುದು ಅಕ್ಷಮ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT