ADVERTISEMENT

ಮೋದಿ ಮೇಷ್ಟ್ರ ಜೀವನಪಾಠ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2014, 4:52 IST
Last Updated 6 ಸೆಪ್ಟೆಂಬರ್ 2014, 4:52 IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶಿಕ್ಷಕರ ದಿನಾಚರ­ಣೆಯಂದು ಆತ್ಮೀಯ ಹರಟೆಯ ಧಾಟಿಯಲ್ಲಿ ರಾಷ್ಟ್ರದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಬಗ್ಗೆ ಕೇಳಿ ಬಂದ ಟೀಕೆಗಳ ಹೊರತಾಗಿಯೂ ಅವರು ಸೂಜಿಗಲ್ಲಿನಂತೆ ಜನಮನವನ್ನು ಹಿಡಿದಿ­ಟ್ಟರು. ದೂರದರ್ಶನ ಮತ್ತು ಅಂತ­ರ್ಜಾಲ­­ದಲ್ಲಿ ನೇರ ಪ್ರಸಾರವಾದ ಈ ಕಾರ್ಯ­ಕ್ರಮದಲ್ಲಿ ಮೋದಿ ಅವರು ಮಕ್ಕಳಿಗೆ ‘ನೀವು ಬರೀ ಪುಸ್ತಕದ ಹುಳು­ಗಳಾಗ­ಬೇಡಿ’ ಎಂದು ಕಿವಿ­ಮಾತು ಹೇಳಿದರು. ಪ್ರಕೃತಿ ಪ್ರೇಮ ಬೆಳೆಸಿ­ಕೊಂಡು ವಿದ್ಯುತ್‌, ನೀರು ಇನ್ನಿತರ ನಿಸರ್ಗ ಸಂಪನ್ಮೂಲ ರಕ್ಷಿಸಲು ಉತ್ತೇಜಿಸಿದರು.

‘ದೇಶಕ್ಕಾಗಿ ಪ್ರಾಣಾರ್ಪಣೆ ಮಾಡು­ವುದು ಅಥವಾ ರಾಜಕಾರಣಿಯಾಗು­ವುದೇ ರಾಷ್ಟ್ರ ಸೇವೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಹಾಗೆ ಭಾವಿಸು­ವುದು ಸರಿಯಲ್ಲ. ರಾಷ್ಟ್ರಕ್ಕೆ ಸೇವೆ ಸಲ್ಲಿ­ಸಲು ಹಲವಾರು ಮಾರ್ಗಗಳಿವೆ’ ಎಂದರು. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬೆಳೆಸಿ­ಕೊಳ್ಳಲು  ಸಲಹೆ ನೀಡಿದರು. ಕಾಮಿಕ್‌್ಸ­ಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳು­ವುದೂ ಒಳ್ಳೆಯದೇ. ಮುಂದೆ ಇದು ಒಳ್ಳೆಯ ಓದಿಗೆ ದಾರಿ ಮಾಡಿ­ಕೊಡು­ತ್ತದೆ ಎಂದರು.

ಇದೇ ವೇಳೆ ಬಾಲ್ಯದ ಬದುಕಿನಲ್ಲಿ ಆನಂದಿಸುವ, ಸಂಭ್ರಮಿ­ಸುವ ಅವಕಾಶ­ವನ್ನು ಕಳೆದುಕೊಳ್ಳ­ಬಾರದು ಎಂದು ಹಿತವಚನ ನುಡಿದರು. ‘ನಿಮ್ಮಲ್ಲಿ ಎಷ್ಟು ಮಕ್ಕಳು ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಬೆವರುತ್ತೀರಿ’ ಎಂದು ಕೇಳಿದರು.

‘ವಿದ್ಯಾರ್ಥಿಗಳು ಬೆವರಿಳಿಯುವಂತೆ ಆಟವಾಡಬೇಕು. ಕೇವಲ ಅಧ್ಯಯನ­ದಲ್ಲೇ ನಲುಗಿ ಹೋಗಬಾರದು. ನಿಮ್ಮಗಳ ಬದುಕಿನಲ್ಲಿ ಈ ಆಟದ ಮೋಜು ಇರಲೇಬೇಕು. ಶಾಲೆ ಮುಗಿದ ಮೇಲೂ ಪುನಃ ಪುಸ್ತಕವನ್ನೇ ಹಿಡಿಯುತ್ತಾ ಕೂರು­ವುದು ಅಥವಾ ಕಂಪ್ಯೂಟರ್‌ ಮುಂದೆ ಕೂರುವುದು ಒಳ್ಳೆಯ ಜೀವನಕ್ರಮವಲ್ಲ’ ಎಂದು ಸೂಚಿಸಿದರು.

ಜೀವನ ಚರಿತ್ರೆಗಳನ್ನು ಓದುವುದ­ರಿಂದ ಇತಿಹಾಸವನ್ನು ಸಮಗ್ರವಾಗಿ ಗ್ರಹಿಸಲು ಅನುಕೂಲವಾಗುತ್ತದೆ. ಕೇವಲ ಮಾಹಿತಿ ಒದಗಿಸುವ ‘ಗೂಗಲ್‌’ನ್ನೇ ಎಲ್ಲದಕ್ಕೂ ನೆಚ್ಚುವ ಬದಲು ಜೀವನ ಚರಿತ್ರೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಸಂವಾದ: ಇಲ್ಲಿನ ಮಾಣೆಕ್‌ ಷಾ ಸಭಾಂಗಣದಲ್ಲಿ ಈ ಕಾರ್ಯ­ಕ್ರಮ ಏರ್ಪಡಿಸಲಾಗಿತ್ತು. ಮೋದಿ ಅವರು ಮಾತ­ನಾಡಿದ ನಂತರ ಸಭಾಂಗಣದಲ್ಲಿದ್ದ ಮಕ್ಕಳು ಹಾಗೂ ರಾಷ್ಟ್ರದ ಇತರ ಆರು ನಗರಗಳ ಮಕ್ಕಳ ಜತೆ ವಿಡಿಯೊ ಕಾನ್ಫರೆನ್‌್ಸ ನೆರವಿನಿಂದ 90 ನಿಮಿಷ ಕಾಲ ಸಂವಾದ ನಡೆಸಿಕೊಟ್ಟರು.

ಮುಖ್ಯೋಪಾಧ್ಯಾಯ: ‘ನೀವೊಬ್ಬ ಮುಖ್ಯೋಪಾಧ್ಯಾಯರಿ­ದ್ದಂತೆ ಎಂದು ಜನ ಹೇಳುತ್ತಾರೆ. ನೀವು ನಿಜ ಜೀವನದಲ್ಲಿ ಹಾಗೆಯೇ ಇದ್ದೀರೇನು’ ಎಂದು ಬಾಲಕಿಯೊಬ್ಬಳು ಕೇಳಿದಳು. ಇದಕ್ಕೆ ಉತ್ತರಿಸಿದ ಮೋದಿ ಅವರು, ‘ನಾನೊಬ್ಬ ಗುರಿ ಸಾಧಕ. ನಾನು ತುಂಬಾ ಪರಿಶ್ರಮ ಹಾಕಿ ಹಿಡಿದ ಕೆಲಸ ಮುಗಿ­ಸು­ತ್ತೇನೆ. ಬೇರೆಯವರಿಂದಲೂ ಅದನ್ನೇ ನಿರೀಕ್ಷಿಸುತ್ತೇನೆ’ ಎಂದರು.

‘ಹೀಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವುದ­ರಿಂದ ನಿಮಗೇನು ಲಾಭ’ ಎಂಬ ಮತ್ತೊಂದು ಪ್ರಶ್ನೆಯೂ ತೂರಿ­ಬಂತು. ಆಗ ಪ್ರಧಾನಿ, ‘ಇದರಿಂದ ಏನೂ ಲಾಭವೇ ಇಲ್ಲ­ದಿ­ದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನಮ್ಮ ಮುಖಗ­ಳನ್ನೇ ನೋಡೀ ನೋಡೀ ಜನರಿಗೆ ಬೇಜಾರಾಗಿ ಹೋಗಿದೆ. ನಿಮ್ಮಂತಹ ಹೊಸ ಮುಖಗಳನ್ನು ನೋಡಿ ಜನ ಹೆಚ್ಚು ಖುಷಿಪ­ಡು­ತ್ತಾರೆ. ಇದೇ ಮೊದಲ ಬಾರಿಗೆ ಟಿ.ವಿ. ಪರದೆಯ ತುಂಬಾ ಮಕ್ಕಳೇ ರಾರಾಜಿಸುತ್ತಿದ್ದಾರೆ. ಇದೇ ನನಗಾಗಿರುವ ಲಾಭ. ನಿಮ್ಮ ಜತೆ ಸಂವಾದ ನಡೆಸಿದ ನಂತರ ನನ್ನೊಳಗೂ ಚೈತನ್ಯ ಮೂಡಿದೆ’ ಎಂದರು.

‘ರಾಜಕೀಯ ನಿಮಗೆ ಕಷ್ಟದ ಕೆಲಸ ಅನ್ನಿಸುತ್ತದೆಯೇ’ ಎಂಬ ಮತ್ತೊಂದು ಪ್ರಶ್ನೆ ಅವರಿಗೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿ­ಸಿದ ಪ್ರಧಾನಿ, ‘ಇಡೀ ದೇಶವನ್ನು ನನ್ನ ಕುಟುಂಬ ಎಂದು ಭಾವಿ­ಸಿ­ರು­ವುದರಿಂದ ನನಗೆ ಕೆಲಸ ಕಷ್ಟ ಅನ್ನಿಸುತ್ತಲೇ ಇಲ್ಲ. ಪ್ರತಿಯೊಬ್ಬರ ಕಷ್ಟ, ಸುಖ ನನ್ನದೂ ಆಗಿದೆ’ ಎಂದರು.

‘ರಾಜಕೀಯವು ವೃತ್ತಿಯಲ್ಲ. ಅದೊಂದು ಸೇವೆ’ ಎಂದ ಮೋದಿ ಅವರು, ಬಾಲ್ಯದಲ್ಲಿ ತಾನೊಬ್ಬ ತುಂಟ ಎಂಬುದನ್ನು ಹೇಳಲು ಮರೆಯಲಿಲ್ಲ. ಮನುಷ್ಯ ನಿಸರ್ಗದ ವಿರುದ್ಧ ಸಮರಕ್ಕೆ ಇಳಿಯಬಾರದು ಎಂದ ಅವರು, ಪ್ರಾಚೀನ ಶಾಸನಗಳಲ್ಲಿ ಪ್ರಕೃತಿಗೆ ಎಷ್ಟು ಮಹತ್ವ ನೀಡಲಾಗಿದೆ ಎಂಬುದನ್ನು ಉದಾಹರಣೆಯೊಂದಿಗೆ ತಿಳಿಹೇಳಿದರು.

ಕೋಟ್ಯಂತರ ಜನ ವೀಕ್ಷಣೆ
ರಾಷ್ಟ್ರದಾದ್ಯಂತ ಕೋಟ್ಯಂತರ ಜನ ಈ ಕಾರ್ಯಕ್ರಮ ವೀಕ್ಷಿಸಿದರು. ಇದರ ನೇರ ಪ್ರಸಾರಕ್ಕೆ ಶಾಲೆಗಳಲ್ಲಿ ವ್ಯವಸ್ಥೆ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿ­ವಾಲಯ ಸೂಚಿಸಿತ್ತು. ಈ ನಿರ್ದೇಶನದ ಹೊರತಾ­ಗಿಯೂ ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರಗಳು ಪ್ರಸಾರಕ್ಕೆ ಉತ್ಸಾಹ ತೋರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.