ADVERTISEMENT

ಮೋದಿ ವಿರೋಧಿಗಳು ಪಾಕ್‌ಗೆ ತೊಲಗಲಿ

ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್‌ ವಿವಾದಿತ ಹೇಳಿಕೆ: ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:41 IST
Last Updated 20 ಏಪ್ರಿಲ್ 2014, 19:41 IST

ನವದೆಹಲಿ/ಪಟ್ನಾ (ಪಿಟಿಐ): ‘ನರೇಂದ್ರ ಮೋದಿ ಅವರನ್ನು ವಿರೋಧಿ­ಸುತ್ತಿರುವವರಿಗೆ ಭಾರತದಲ್ಲಿ ಜಾಗ ಇಲ್ಲ, ಅವರು ಪಾಕಿಸ್ತಾನಕ್ಕೆ ಹೋಗಬೇಕು’ ಎಂದು  ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ನೀಡಿದ ಹೇಳಿಕೆಯು ಈಗ ಹೊಸ ವಿವಾದ ಸೃಷ್ಟಿಸಿದೆ.

ಈ ಹೇಳಿಕೆಯು ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಪಕ್ಷದ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರೇ ಈ ಬಗ್ಗೆ ಛೀಮಾರಿ ಹಾಕಿದ್ದರೂ ಗಿರಿರಾಜ್‌ ಸಿಂಗ್‌ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಈಗಲೂ ತಮ್ಮ ಈ ಹೇಳಿಕೆಗೆ ತಾವು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಜಾರ್ಖಂಡ್‌ ಪೊಲೀಸರು ಈ ವಿವಾದಿತ ಹೇಳಿಕೆ ಸಂಬಂಧ ಗಿರಿರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಭಾಗಲ್ಪುರದಲ್ಲಿ ಪಕ್ಷದ ಅಭ್ಯರ್ಥಿ ಸೈಯದ್‌ ಶಹನವಾಜ್‌ ಹುಸೇನ್‌ ಪರ ಪ್ರಚಾರ ಮಾಡುತ್ತಿ ದ್ದಾಗಲೇ ದೂರ­ವಾಣಿ ಮೂಲಕ ಸುದ್ದಿ ಸಂಸ್ಥೆ ಯೊಂದಿಗೆ ಮಾತನಾಡಿದ ಅವರು, ‘ಹಲವು ಪ್ರಭಾವಿ ರಾಷ್ಟ್ರಗಳು ಮೋದಿ ಪ್ರಧಾನಿ­ಯಾಗುವುದನ್ನು ತಡೆಯುವುದಕ್ಕೆ ಏನೆಲ್ಲ ಕಸರತ್ತು ಮಾಡುತ್ತಿವೆ. ಪಾಕಿಸ್ತಾನ­ವಂತೂ ತುದಿಗಾಲ ಮೇಲೆ ನಿಂತಿದೆ’ ಎಂದು ಆರೋಪಿಸಿದರು.

‘ಈ ವಿಷಯದಲ್ಲಿ ಭಾರತದ ಕೆಲವು ನಾಯಕರೂ ಪಾಕ್‌್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.

‘ಇದಕ್ಕಾಗಿಯೇ ನಾನು ಹೀಗೆ ಹೇಳಿದೆ. ಕುಚ್‌ ಗಲತ್‌ ನಹಿ ಕಹಾಂ ಹಮ್ನೆ. ಜೊ ಕಹಾ ಉಸ್‌ಪೆ ಕಾಯಂ ಹ್ಞೂ (ನಾನು ತಪ್ಪೇನು ಹೇಳಿಲ್ಲ. ಏನು ಹೇಳಿರುವೆನೋ ಅದಕ್ಕೆ ಬದ್ಧ­ನಾ­ಗಿ­ದ್ದೇನೆ)’ ಎಂದು ಅವರು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿ­ಕೊಂಡರು. ಜಾರ್ಖಂಡ್‌­ನಲ್ಲಿ ಶನಿ­ವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗಿರಿರಾಜ್‌ ಸಿಂಗ್‌ ಈ ಹೇಳಿಕೆ ನೀಡಿದ್ದರು. ಗಿರಿ­ರಾಜ್‌ ಸಿಂಗ್‌,  ಬಿಹಾರದ ನವಾಡಾ ಲೋಕ­ಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ರಾಜನಾಥ್‌ ಛೀಮಾರಿ:  ವಿವಾದಿತ ಹೇಳಿಕೆ ನೀಡಿದ ಗಿರಿ­ರಾಜ್‌ ಸಿಂಗ್‌ ಅವರಿಗೆ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಛೀಮಾರಿ ಹಾಕಿದ್ದಾರೆ. ‘ಈ ರೀತಿ ನಂಜು ಕಾರಬೇಡಿ. ಮುಂದೆ ಇಂಥ ಹೇಳಿಕೆ ನೀಡ­ಬೇಡಿ’ ಎಂದೂ  ತಾಕೀತು ಮಾಡಿದ್ದಾರೆ. ‘ನಮ್ಮ ಪಕ್ಷ ಎಲ್ಲರನ್ನೂ ಜತೆಗೆ ಕರೆದು­ಕೊಂಡು ಹೋಗುತ್ತದೆ. ‘‘ನ್ಯಾಯ ಹಾಗೂ ಮಾನ­ವೀಯತೆ’’ಯ ರಾಜ­ಕೀಯ­­ದಲ್ಲಿ ಬಿಜೆಪಿ ನಂಬಿಕೆ ಇಟ್ಟು­ಕೊಂಡಿದೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಗಿರಿರಾಜ್‌, ಗಡ್ಕರಿ ವಿರುದ್ಧ ಎಫ್‌ಐಆರ್‌:(ರಾಂಚಿ):  ‘ಕೇಂದ್ರವು ದನದ ಮಾಂಸ ರಫ್ತು ಮಾಡು ವವರಿಗೆ ಸಬ್ಸಿಡಿ ನೀಡುತ್ತದೆ. ಆದರೆ, ದನ ಸಾಕುವವರಿಗೆ ತೆರಿಗೆ ವಿಧಿಸುತ್ತದೆ’ ಎಂಬ ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ನಾಯಕರಾದ ನಿತಿನ್‌ ಗಡ್ಕರಿ, ಗಿರಿರಾಜ್‌ ಸಿಂಗ್‌ ಮತ್ತಿತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.