ADVERTISEMENT

ಮೋದಿ ಹಾದಿಯ ಸುಖ ದುಃಖ

ಎನ್‌ಡಿಎ ಸರ್ಕಾರಕ್ಕೆ 3 ವರ್ಷ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಮೋದಿ ಹಾದಿಯ ಸುಖ ದುಃಖ
ಮೋದಿ ಹಾದಿಯ ಸುಖ ದುಃಖ   

ಭಾರಿ ಬಹುಮತದೊಂದಿಗೆ 2014ರ ಮೇ 26ರಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇಂದಿಗೆ (ಮೇ 26 ಶುಕ್ರವಾರ) ಮೂರು ವರ್ಷ ತುಂಬಿದೆ. ಚುನಾವಣೆ ಸಂದರ್ಭದಲ್ಲಿ ಹತ್ತು ಹಲವು ಭರವಸೆಗಳನ್ನು ನೀಡಿದ್ದ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ನಿರೀಕ್ಷೆ ಅಪಾರವಾಗಿಯೇ ಇತ್ತು. ಹೊಸ ಸರ್ಕಾರ ನೀತಿಯ ಮಟ್ಟದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಅರ್ಥ ವ್ಯವಸ್ಥೆ, ವಿದೇಶಾಂಗ ನೀತಿ, ರಕ್ಷಣೆ, ಮೂಲಸೌಕರ್ಯಗಳಲ್ಲಿ ಹಲವು ಪರಿವರ್ತನೆಗಳು ಆಗಿವೆ.

ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ವಿದೇಶಾಂಗ ನೀತಿಯ ಬಗ್ಗೆ ಮೋದಿ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಸ್ವತಃ 56 ದೇಶಗಳಿಗೆ ಭೇಟಿ ನೀಡಿದ್ದಾರೆ. ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ದೇಶಗಳ ಮುಖ್ಯಸ್ಥರು ಭಾರತಕ್ಕೆ ಬಂದಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತ ಪಾಲಿಸುತ್ತಾ ಬಂದ ಅಲಿಪ್ತ ನೀತಿಯನ್ನು ಅಧಿಕೃತವಾಗಿ ಕೈಬಿಟ್ಟಿಲ್ಲವಾದರೂ ಸರ್ಕಾರದ ಮನೋಭಾವದಲ್ಲಿ ಗಮನಾರ್ಹ ಬದಲಾವಣೆ ಆಗಿದೆ. ಪ್ರವಾಸದ ಮೂಲಕವೇ ಮೋದಿ ಅವರು ವಿದೇಶಾಂಗ ನೀತಿಯ ದಿಕ್ಕು ಬದಲಿಸಿದ್ದಾರೆ.

ಕಪ್ಪುಹಣ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಗರಿಷ್ಠ ಮುಖಬೆಲೆಯ ನೋಟುಗಳನ್ನು ಕಳೆದ ವರ್ಷ ರದ್ದು ಮಾಡಲಾಗಿದೆ. ಇಡೀ ಅರ್ಥ ವ್ಯವಸ್ಥೆಯ ಮೇಲೆ ಅದು ದೊಡ್ಡ ಮಟ್ಟದ ಪರಿಣಾಮ ಬೀರಿದೆ. ವಿದೇಶಿ ಹೂಡಿಕೆಗೆ ಒತ್ತು ಕೊಡಲಾಗಿದೆ. ಹಲವು ವರ್ಷಗಳಿಂದ ಬಾಕಿ ಇದ್ದ ಹತ್ತಾರು ರಕ್ಷಣಾ ಖರೀದಿಯನ್ನು ಪೂರ್ಣಗೊಳಿಸಲಾಗಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.  ಸರ್ಕಾರದ ಹಲವು ನಿರ್ಧಾರಗಳಿಗೆ  ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ. 

ಗೋಮಾಂಸ ತಿನ್ನುವುದಕ್ಕೆ ಸಂಬಂಧಿಸಿ ನಡೆದ ಹತ್ಯೆಗಳು, ಅಸಹಿಷ್ಣುತೆ ಇದೆ ಎಂಬ ಆರೋಪ, ನೋಟು ರದ್ದತಿಯಿಂದ ಅರ್ಥವ್ಯವಸ್ಥೆ ಹಳಿತಪ್ಪಿತು ಎಂಬ ಆಪಾದನೆ, ಕಾಶ್ಮೀರದಲ್ಲಿ ತೀವ್ರಗೊಂಡ ಉಗ್ರರ ಅಟ್ಟಹಾಸ, ನಕ್ಸಲ್‌ ಹಿಂಸಾಚಾರದಲ್ಲಿ ಹೆಚ್ಚಳ, ಮೋದಿ ವಿದೇಶಗಳಲ್ಲಿಯೇ ಹೆಚ್ಚು ದಿನ ಕಳೆದಿದ್ದಾರೆ ಎಂಬ ಕುಹಕ, ಸರ್ಕಾರ ಶ್ರೀಮಂತ ಉದ್ಯಮಿಗಳ ಪರ ಎಂಬ ದೂರುಗಳೆಲ್ಲವೂ ಕೇಳಿಬಂದಿವೆ. ಮೂರು ವರ್ಷಗಳಲ್ಲಿ ಸರ್ಕಾರ ಮಾಡಿದ್ದೇನು  ಎಂಬುದರ ಚುಟುಕು ನೋಟ ಇಲ್ಲಿದೆ.

ವಿದೇಶಾಂಗ ನೀತಿ ಬದಲು
* ವಿದೇಶಾಂಗ ನೀತಿಯಲ್ಲಿ ಸಾಂಪ್ರದಾಯಿಕ ನಿಲುವನ್ನು ಎನ್‌ಡಿಎ ಸರ್ಕಾರ ತ್ಯಜಿಸಿತು.
* ಚೀನಾದ ಮಹತ್ವಾಕಾಂಕ್ಷೆಯ ಒಂದು ವಲಯ, ಒಂದು ರಸ್ತೆ (ಒಬಿಒಆರ್‌) (ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನ ಬಹುಭಾಗಗಳನ್ನು ರಸ್ತೆ ಮೂಲಕ ಸಂಪರ್ಕಿಸುವ ಯೋಜನೆ) ಮತ್ತು ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಅನ್ನು ಭಾರತ ಬಹಿರಂಗವಾಗಿಯೇ ವಿರೋಧಿಸಿತು
* ಪಾಕಿಸ್ತಾನವನ್ನು ಬಿಟ್ಟು ನೆರೆ ದೇಶಗಳ ಜತೆ ಹೆಚ್ಚು ನಿಕಟ ಸಂಬಂಧಕ್ಕೆ ಪ್ರಯತ್ನ

* ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್‌, ಶ್ರೀಲಂಕಾ, ಥಾಯ್ಲೆಂಡ್‌, ಭೂತಾನ್‌ ಮತ್ತು ನೇಪಾಳ ದೇಶಗಳು ಸದಸ್ಯರಾಗಿರುವ ಬಂಗಾಳ ಕೊಲ್ಲಿಯ ರಾಷ್ಟ್ರಗಳ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಸಂಸ್ಥೆಗೆ (ಬಿಮ್‌ಸ್ಟೆಕ್‌) ಪುನಶ್ಚೇತನ
* ಭಾರತ ಬಾಹ್ಯಾಕಾಶಕ್ಕೆ ಹಾರಿಬಿಟ್ಟ ದಕ್ಷಿಣ ಏಷ್ಯಾ ಸಹಕಾರ ಉಪಗ್ರಹ ಈ ಪ್ರದೇಶದಲ್ಲಿ ದೇಶದ ವರ್ಚಸ್ಸು ಹೆಚ್ಚಿಸಿತು
* ಏಷ್ಯಾ ಪೆಸಿಫಿಕ್‌ ದೇಶಗಳಿಗೆ ಒತ್ತು ನೀಡುವ ‘ಆ್ಯಕ್ಟ್‌ ಈಸ್ಟ್‌’ ನೀತಿ ಜಾರಿ

* ಯುರೋಪ್‌ ಮತ್ತು ಅಮೆರಿಕದ ಜತೆಗಿನ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಲು ಪಶ್ಚಿಮದೊಂದಿಗೆ ಸಂಪರ್ಕ ಅಥವಾ ಲಿಂಕ್‌ ವೆಸ್ಟ್‌ ಎಂಬ ನೀತಿ ಜಾರಿ
* ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಕತಾರ್‌, ಸೌದಿ ಅರೇಬಿಯಾ, ಇರಾನ್‌ ಮತ್ತು ಒಮಾನ್‌ಗೆ ಮೋದಿ ಭೇಟಿ; ಪೌರ್ವಾತ್ಯ ದೇಶಗಳ ಜತೆಗಿನ ಸಂಬಂಧ ನವೀಕರಣ



ವಿದೇಶಿ ಹೂಡಿಕೆ
₹9.62 ಲಕ್ಷಕೋಟಿ
ಕಳೆದ ಮೂರು ವರ್ಷಗಳಲ್ಲಿ ಹೂಡಿಕೆ ಮೊತ್ತ
₹7.55 ಲಕ್ಷಕೋಟಿ ಯುಪಿಎ ಸರ್ಕಾರದ ಕೊನೆಯ ಮೂರು ವರ್ಷಗಳ ಹೂಡಿಕೆ ಮೊತ್ತ

ಅಂಗೀಕಾರಗೊಂಡ ಪ್ರಮುಖ ಮಸೂದೆಗಳು
* ಸರಕು ಮತ್ತು ಸೇವಾ ತೆರಿಗೆ ಮಸೂದೆ (ಈ ಮಸೂದೆ ಮಂಡನೆಗಾಗಿ ಸಂವಿಧಾನಕ್ಕೆ ತಿದ್ದುಪಡಿಯನ್ನೂ ತರಲಾಗಿತ್ತು.)
* ಕಂಪೆನಿಗಳ (ತಿದ್ದುಪಡಿ) ಮಸೂದೆ–2014
* ಆರ್ಥಿಕ ಸುರಕ್ಷತೆ ಮತ್ತು ದಿವಾಳಿ ಸಂಹಿತೆ ಮಸೂದೆ–2015

ADVERTISEMENT

* ಬೇನಾಮಿ ವ್ಯವಹಾರ (ತಡೆ)(ತಿದ್ದುಪಡಿ) ಮಸೂದೆ–2015
* ಕೈಗಾರಿಕೆ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ–2015
* ಭೂ ಸ್ವಾಧೀನ (ತಿದ್ದುಪಡಿ) ಮಸೂದೆ –2015
(2013ರ ಭೂಸ್ವಾಧೀನ ಕಾಯ್ದೆಗೆ ಎನ್‌ಡಿಎ ಸರ್ಕಾರ ಪ್ರಮುಖ 5 ತಿದ್ದುಪಡಿಗಳನ್ನು 2014ರಲ್ಲಿ ಮಾಡಿತ್ತು. ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣಕ್ಕೆ 3 ಬಾರಿ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿ ಮಾಡಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ಕಾಯ್ದೆ ಜಾರಿಗೆ ಸುಗ್ರೀವಾಜ್ಞೆಯ ಮಾರ್ಗವನ್ನು  ಬಳಸುತ್ತಿರುವುದಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಒತ್ತಡಕ್ಕೆ ಮಣಿದ ಸರ್ಕಾರ, ತಾನು ಮಾಡಿದ್ದ ತಿದ್ದುಪಡಿಗಳನ್ನು ಕೈಬಿಡಲು ನಿರ್ಧರಿಸಿತ್ತು)

* ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಗಳ (ತೆರಿಗೆ ಹೇರಿಕೆ) ಮಸೂದೆ–2015
* ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ)  ಮಸೂದೆ–2016
* ನೌಕರರ ಪರಿಹಾರ (ತಿದ್ದುಪಡಿ) ಮಸೂದೆ –2016

* ಆಧಾರ್‌ ಮಸೂದೆ–2016
* ಮೋಟಾರು ವಾಹನ (ತಿದ್ದುಪಡಿ) ಮಸೂದೆ–2016
* ಲೋಕಪಾಲ ಮತ್ತು ಲೋಕಾಯುಕ್ತ (ತಿದ್ದುಪಡಿ) ಮಸೂದೆ–2016



ನೋಟು ರದ್ದತಿ
ಮೂರು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಕೈಗೊಂಡ ಅತ್ಯಂತ ಮಹತ್ವದ ನಿರ್ಧಾರ.  ಕಪ್ಪು ಹಣದ ಹಾವಳಿ ನಿಯಂತ್ರಣ ಮತ್ತು  ಭ್ರಷ್ಟಾಚಾರ ನಿಗ್ರಹಕ್ಕಾಗಿ ₹500, ₹1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸುತ್ತಿರುವುದಾಗಿ ಪ್ರಧಾನಿ ಮೋದಿ ಕಳೆದ ವರ್ಷದ ನವೆಂಬರ್‌ 8ರಂದು  ಘೋಷಿಸಿದರು.  ಆದರೆ, ನಂತರ ಈ ನಿರ್ಧಾರದ  ಉದ್ದೇಶ ಡಿಜಿಟಲ್‌ ವಹಿವಾಟಿನತ್ತ ತಿರುಗಿತು. ಹಳೆ ನೋಟುಗಳ ವಿನಿಮಯ ಮತ್ತು ಬ್ಯಾಂಕ್‌ ಖಾತೆಗಳ ಜಮಾವಣೆಗೆ 2 ತಿಂಗಳ ಸಮಯ ನೀಡಲಾಗಿತ್ತಾದರೂ,  ನಗದು ಕೊರತೆಯಿಂದ ಜನರು ಪಡಿಪಾಟಲು ಪಡಬೇಕಾಯಿತು.

ಮನದ ಮಾತು
ತಮ್ಮ ಮನಸ್ಸಿನ ಮಾತುಗಳನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡಿದ್ದು ಆಕಾಶವಾಣಿಯನ್ನು.  ಪ್ರತಿ ತಿಂಗಳು ದೇಶವನ್ನು ಉದ್ದೇಶಿಸಿ ಅವರು ಆಡುವ ಮಾತು ಜನಪ್ರಿಯತೆ ಗಳಿಸಿದೆ.

ಕೆಂಪು ದೀಪಕ್ಕೆ ವಿದಾಯ
ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಅತಿ ಗಣ್ಯ ವ್ಯಕ್ತಿ (ವಿಐಪಿ) ಎಂದು ಗುರುತಿಸಿಕೊಂಡಿರುವವರು ತಮ್ಮ ವಾಹನಗಳಲ್ಲಿ ಕೆಂಪು ದೀಪ ಬಳಸುವುದನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಯಿತು. ಈ ತಿಂಗಳ 1ರಿಂದ ಇದು ಜಾರಿಗೆ ಬಂದಿದೆ.

ವಿವಾದಗಳು
* ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರ ವಿವಾದ
* ಸಚಿವೆ ಸ್ಮೃತಿ ಇರಾನಿ ಪದವಿ ವಿವಾದ
* ಅಸಹಿಷ್ಣುತೆ ವಿರುದ್ಧ ಪ್ರಶಸ್ತಿ ವಾಪಸ್‌ ಅಭಿಯಾನ

* ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲಾ ಆತ್ಮಹತ್ಯೆ, ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
* ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು, ನಂತರದ ಪ್ರತಿಭಟನೆ
* ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆಯ ಮುಖ್ಯಸ್ಥರಾಗಿ ನಟ ಗಜೇಂದ್ರ ಚೌಹಾಣ್‌ ನೇಮಕ, ಸಂಸ್ಥೆಯ ವಿದ್ಯಾರ್ಥಿಗಳಿಂದ ವಿರೋಧ

* ಗೋಮಾಂಸ ಪತ್ತೆಯಾಯಿತು ಎಂಬ ಕಾರಣಕ್ಕೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್‌ ಎಂಬವರ ಹತ್ಯೆ. ದೇಶಾದಾದ್ಯಂತ ಪ್ರತಿಭಟನೆ
* ಗೋ ಹತ್ಯೆ ನಿಷೇಧ ಕಾನೂನು,  ಸ್ವಯಂ ಘೋಷಿತ ಗೋರಕ್ಷಕರ ಹಾವಳಿ, ಗುಜರಾತ್‌ನಲ್ಲಿ ದಲಿತರ ಮೇಲೆ ಹಲ್ಲೆ
* ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ರದ್ದು ಮಾಡಿದ ಸುಪ್ರೀಂ ಕೋರ್ಟ್‌

* ಅರುಣಾಚಲ ಪ್ರದೇಶ ಸರ್ಕಾರದ ವಿರುದ್ಧ  ರಾಜ್ಯಪಾಲರ ಕಚೇರಿ ದುರ್ಬಳಕೆ ಆರೋಪ
* ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಭಾರತಕ್ಕೆ ಬಂದಿದ್ದಾಗ ಮೋದಿ  ಧರಿಸಿದ್ದ ಸೂಟಿನ ವಿವಾದ. ಸೂಟಿನಲ್ಲಿ ಚಿನ್ನದ ನೂಲಿನಲ್ಲಿ ನರೇಂದ್ರ ಮೋದಿ ಎಂದು ಬರೆಯಲಾಗಿತ್ತು ಎಂಬ ಆರೋಪ

* ಸಚಿವರು, ಸಂಸದರು ಸೇರಿದಂತೆ ಬಿಜೆಪಿ ಮುಖಂಡರ ಆಕ್ಷೇಪಾರ್ಹ ಹೇಳಿಕೆಗಳು
* ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾವ
* ತ್ರಿವಳಿ ತಲಾಖ್‌ ವಿರುದ್ಧ ನಿಲುವು
*
ಪ್ರಮುಖ ಯೋಜನೆಗಳು

ಸ್ವಚ್ಛ ಭಾರತ ಅಭಿಯಾನ
ಸ್ವಚ್ಛ, ಸ್ವಾಸ್ಥ್ಯ ಮತ್ತು ಸುಂದರ ದೇಶ ನಿರ್ಮಾಣದ ಕನಸನ್ನು ನನಸು ಮಾಡುವ ಧ್ಯೇಯದೊಂದಿಗೆ ಆರಂಭಿಸಲಾದ ಯೋಜನೆ. 2014ರ ಅಕ್ಟೋಬರ್‌ 2ರಂದು (ಗಾಂಧಿ ಜಯಂತಿ ದಿನ) ಯೋಜನೆಗೆ ಚಾಲನೆ

ಭಾರತದಲ್ಲೇ ತಯಾರಿಸಿ
ದೇಶೀಯ ತಯಾರಿಕಾ ವಲಯಕ್ಕೆ ಉತ್ತೇಜನ ನೀಡುವ ಗುರಿ ಇಟ್ಟುಕೊಂಡು ರೂಪಿಸಲಾದ ಯೋಜನೆ. ಇದರ ಅಡಿಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪೆನಿಗಳಿಗೆ ದೇಶದಲ್ಲಿ ಉದ್ದಿಮೆ ಸ್ಥಾಪಿಸಲು ಕೇಂದ್ರ ಸರ್ಕಾರ ರತ್ನಗಂಬಳಿ ಹಾಸಿದೆ.

ಸ್ಮಾರ್ಟ್‌ ಸಿಟಿ
ದೇಶದ ನಗರಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿ ಪಡಿಸುವ ಕನಸು ಈ ಯೋಜನೆ ಹಿಂದಿದೆ. ಇದರ ಅಡಿಯಲ್ಲಿ, ಸ್ವಚ್ಛತೆ, ಮೂಲಸೌಕರ್ಯ, ಸುಸ್ಥಿರ ಅಭಿವೃದ್ಧಿ ಹೊಂದಿರುವ ನಗರಗಳನ್ನು ನಿರ್ಮಿಸುವುದು ಕೇಂದ್ರದ ಗುರಿ.

ಡಿಜಿಟಲ್‌ ಇಂಡಿಯಾ
ಡಿಜಿಟಲ್‌ ಆಧರಿತ ಸಮಾಜ ನಿರ್ಮಾಣ, ಇ–ಆಡಳಿತ ಮತ್ತು ಡಿಜಿಟಲ್‌ ವಹಿವಾಟು ಈ ಯೋಜನೆ ಉದ್ದೇಶ. ನೋಟು ರದ್ದತಿ ನಂತರ ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಒತ್ತು ನೀಡಿತು. ನಗದು ಕೊರತೆ ಉಂಟಾದ ಸಂದರ್ಭದಲ್ಲಿ ಜನರು ಸ್ವಲ್ಪ ಡಿಜಿಟಲ್‌ ವಹಿವಾಟಿನತ್ತ ಮುಖ ಮಾಡಿದರೂ, ನೋಟುಗಳ ಲಭ್ಯತೆ ಸರಾಗವಾದಾಗ ಮತ್ತೆ ನಗದು ವಹಿವಾಟಿನತ್ತ ಹೊರಳಿದರು.

ಪ್ರಧಾನಮಂತ್ರಿ ಉಜ್ವಲ ಯೋಜನೆ
ಕಡು ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆ. ಕನಿಷ್ಠ 5 ಕೋಟಿ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕಾಗಿ ₹8 ಸಾವಿರ ಕೋಟಿ ಮೀಸಲಿಟ್ಟಿದೆ. ಆರ್ಥಿಕವಾಗಿ ಸಬಲರಾಗಿರುವವರು ಎಲ್‌ಪಿಜಿ ಸಬ್ಸಿಡಿ ಬಿಟ್ಟುಬಿಡುವಂತೆ ಕರೆ ನೀಡಿದ್ದ ಪ್ರಧಾನಿ ಮೋದಿ, ಇದರಿಂದ ಉಳಿಯುವ ಹಣವನ್ನು ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಬಳಸುವುದಾಗಿ ಘೋಷಿಸಿದ್ದರು.

ಬುಲೆಟ್‌ ರೈಲು
ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು. ಮೊದಲ ಹಂತದಲ್ಲಿ ಮುಂಬೈ– ಅಹಮದಾಬಾದ್‌ ನಡುವೆ ಬುಲೆಟ್‌ ರೈಲು ಓಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ₹ 1 ಲಕ್ಷ ಕೋಟಿ ವೆಚ್ಚವಾಗಲಿದೆ. ಯೋಜನೆ ಅನುಷ್ಠಾನಕ್ಕೆ ಜಪಾನ್‌ ನೆರವಾಗಲಿದೆ.

ಜನಧನ ಯೋಜನೆ
28.63 ಕೋಟಿ ಈವರೆಗೆ ತೆರೆಯಲಾಗಿರುವ ಖಾತೆ ಸಂಖ್ಯೆ
₹64,000 ಕೋಟಿ ಖಾತೆಗಳಲ್ಲಿ ಇರುವ ಒಟ್ಟು ಹಣ

ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ  ಬ್ಯಾಂಕಿಂಗ್‌ ವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಘೋಷಿಸಲಾದ ಯೋಜನೆ. ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್‌ ಖಾತೆಯನ್ನು ಹೊಂದಬೇಕು ಎಂಬುದು ಸರ್ಕಾರದ ಆಶಯ. ಕೇಂದ್ರದ ಜನ ಕಲ್ಯಾಣ ಯೋಜನೆಗಳ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವುದು ಅದರ ಗುರಿ. ಯೋಜನೆಯ ಅಡಿಯಲ್ಲಿ ಶೂನ್ಯ ಮೊತ್ತದ ಖಾತೆಯನ್ನು ತೆರೆಯಬಹುದು.
*
ಸಿಗದ ಸದಸ್ಯತ್ವ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಮತ್ತು ಪರಮಾಣು ಪೂರೈಕೆದಾರರ ರಾಷ್ಟ್ರಗಳ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವ ಪಡೆಯಲು ಭಾರತ ಹಲವಾರು ವರ್ಷಗಳಿಂದ ಶ್ರಮ ಪಡುತ್ತಲೇ ಇದೆ. ಎನ್‌ಡಿಎ ಸರ್ಕಾರ ಇದಕ್ಕೆ ಮತ್ತಷ್ಟು ಒತ್ತು ನೀಡಿತು. ಆದರೆ, ಪ್ರತಿಬಾರಿಯೂ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿತು. ಇವುಗಳ ನಡುವೆ, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ರಾಷ್ಟ್ರಗಳ ಗುಂಪಿಗೆ (ಎಂಟಿಸಿಆರ್‌) ಸೇರ್ಪಡೆಗೊಳ್ಳುವಲ್ಲಿ ಭಾರತ ಯಶಸ್ವಿಯಾಯಿತು.

ಪಾಕ್‌ ಜತೆಗೆ ಸಾಧ್ಯವಾಗದ ಸೌಹಾರ್ದ
2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕೂಡ ಪಾಕಿಸ್ತಾನದ ಜತೆಗಿನ ಸಂಬಂಧ ಸೌಹಾರ್ದದಿಂದ ಇರಲಿಲ್ಲ.
ಮೋದಿ  ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ನೆರೆಯ ಎಲ್ಲ ದೇಶಗಳ ಮುಖ್ಯಸ್ಥರಿಗೆ ಆಹ್ವಾನ ಇತ್ತು. ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರೂ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಬ್ಬರು ಮುಖಂಡರ ನಡುವೆ ಉಡುಗೊರೆಗಳ ವಿನಿಮಯ ನಡೆಯಿತು, ನಂತರ ಷರೀಫ್‌ ಹುಟ್ಟು
ಹಬ್ಬಕ್ಕೆ ಮೋದಿ ಅವರು ಪಾಕಿಸ್ತಾನಕ್ಕೆ ದಿಢೀರ್‌ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದರು.

ಎರಡೂ ದೇಶಗಳ ನಡುವೆ ಸಾಮರಸ್ಯ ಮೂಡಲಿದೆ ಎಂಬ ನಿರೀಕ್ಷೆಗಳನ್ನು ಇದು ಹುಟ್ಟಿಸಿದ್ದು ನಿಜ. ಆದರೆ ಇದು ಬಹಳ ದಿನ ಉಳಿಯಲಿಲ್ಲ.
2016ರ ಜನವರಿ 1ರ ರಾತ್ರಿ ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ  ಪಾಕ್ ಉಗ್ರರು ದಾಳಿ ನಡೆಸಿದರು.  ಸೆ. 18ರಂದು ಉರಿ ಸೇನಾ ನೆಲೆ ಮೇಲೆ ದಾಳಿ ನಡೆಯಿತು.  ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಿತ್ಯದ ಸಂಗತಿಯಾದರೆ ಪಾಕಿಸ್ತಾನದ ಸೇನೆ ಭಾರತೀಯ ಯೋಧರ ಶಿರಚ್ಛೇದ ನಡೆಸಿದ ಘಟನೆಗಳೂ ನಡೆದವು. 

ಭಾರತದ ಸೇನೆಯ ಪ್ರತೀಕಾರವೂ ಹೆಚ್ಚು ತೀವ್ರವಾಗಿತ್ತು. ಗಡಿ ನಿಯಂತ್ರಣ ರೇಖೆಯಿಂದಾಚೆಗಿನ ಉಗ್ರರ ಶಿಬಿರಗಳ ಮೇಲೆ ‘ನಿರ್ದಿಷ್ಟ’ ದಾಳಿ ನಡೆಸಿದ ಸೇನೆ ಹಲವು ಶಿಬಿರಗಳನ್ನು ಧ್ವಂಸಗೊಳಿಸಿತು. ಇದು ಸೇನಾ ನೆಲೆಗಳ ಮೇಲಿನ ದಾಳಿಗೆ ಸೇಡು. ಪಾಕಿಸ್ತಾನದ ಬಂಕರ್‌ಗಳನ್ನು ನಾಶ ಮಾಡಿದ ವಿಡಿಯೊಗಳನ್ನು ಮೇ ಮೂರನೇ ವಾರದಲ್ಲಿ ಭಾರತದ ಸೇನೆ ಬಿಡುಗಡೆ ಮಾಡಿದೆ. ಇದು ಇತ್ತೀಚೆಗೆ ಪಾಕ್‌ ಸೇನೆ ಬಿಎಸ್‌ಎಫ್‌ ಯೋಧರಿಬ್ಬರ ಮೇಲೆ ನಡೆಸಿದ ಕ್ರೌರ್ಯಕ್ಕೆ ಪ್ರತೀಕಾರವಾಗಿತ್ತು. ಸದ್ಯದ ಮಟ್ಟಿಗೆ ಪಾಕಿಸ್ತಾನ ಜತೆಗಿನ ಸಂಬಂಧ ಸೌಹಾರ್ದವಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.